ಏಕೇಶವಾದ

ಏಕೇಶವಾದ(ಯುನಿಟೆರಿಯನಿಸಂ) : ದೇವತ್ರಯೈಕತ್ವವಾದದ ವಿರುದ್ಧವಾಗಿ ದೇವರ ಏಕವ್ಯಕ್ತಿತ್ವವನ್ನು ಎತ್ತಿ ಹಿಡಿಯುವ ವಾದ . ದೇವತ್ರಯೈಕತ್ವವಾದ ದೇವರನ್ನು ಪಿತ, ಸುತ ಮತ್ತು ದೇವಾತ್ಮ ಎಂಬ ಮೂರು ರೂಪಗಳಲ್ಲಿ ಗ್ರಹಿಸುತ್ತದೆ. ಏಕೇಶವಾದ ದೇವರನ್ನು ಪಿತನೆಂಬ ಒಂದೇ ರೂಪದಲ್ಲಿ ಗ್ರಹಿಸುತ್ತದೆ. ಆದಿಕ್ರೈಸ್ತ ಸಭೆಯಲ್ಲಿ ಏರಿಯನ್ ಪಂಥ, ಮಾನಾರ್ಕಿಯನಿಸಮುಗಳೇ ಮೊದಲಾದ ರೂಪದಲ್ಲಿ ಈ ಬೋಧನೆ ಪ್ರಚಾರದಲ್ಲಿತ್ತು. ನೈಸಿಯ (ಪ್ರ.ಶ. 326) ಮತ್ತು ಕಾನ್ಸ್ಟ್ಟ್ಯಾಂಟಿನೋಪಲ್‍ಗಳಲ್ಲಿ (ಪ್ರ.ಶ. 381) ಜರುಗಿದ ಧಾರ್ಮಿಕ ಮಹಾಸಭೆಗಳಲ್ಲಿ ಇದನ್ನು ಖಂಡಿಸಿ ದೇವತ್ರಯೈಕತ್ವವನ್ನು ಕ್ರೈಸ್ತ ಅಧಿಕೃತ ಧರ್ಮ ಸಿದ್ಧಾಂತವಾಗಿ ಸಾರಿದರು.

ವಿದ್ಯೆಯ ಪುನರುಜ್ಜೀವನದ (ರಿನೆಸಾನ್ಸ್‌) ಕಾಲದಲ್ಲಿ ಜನ ಧಾರ್ಮಿಕ ವಿಷಯ ಗಳನ್ನು ಕುರಿತು ನಿರ್ಭಯವಾಗಿ ಹಾಗೂ ಸ್ವತಂತ್ರವಾಗಿ ಆಲೋಚನೆ ಮಾಡತೊಡಗಿದಾಗ ಆಧುನಿಕ ಏಕೇಶವಾದ ಮತ್ತೆ ತಲೆದೋರಿತು. ಮಾರ್ಟಿನ್ ಸೆಲ್ಲೇರಿಯನ್ (1499-1564) ಎಂಬಾತ ಈ ಬೋಧನೆಯ ಪ್ರಥಮ ಪ್ರತಿಪಾದಕ. 16-17ನೆಯ ಶತಮಾನದಲ್ಲಿ ಇದು ಒಂದು ಸಂಘವಾಗಿ ಪೋಲೆಂಡ್, ಹಂಗೇರಿ ಮತ್ತು ಇಂಗ್ಲೆಂಡುಗಳಲ್ಲಿ ಸ್ಥಾಪಿತವಾಯಿತು. 1803ರಲ್ಲಿ ವಿಲಿಯಂ ಇಲ್ಲಿರಿಚಾರ್ಲ್ಸ್ಟನ್ ಎಂಬಾತ ಈ ಬೋಧನೆಯನ್ನು ಅಮೆರಿಕದಲ್ಲಿ ಪ್ರಚಾರ ಮಾಡಿದ. ಅಲ್ಲಿಯ ಕಾಂಗ್ರಗೇಷನಲ್ ಸಭೆಗಳಲ್ಲಿ ಅದು ವಿಶೇಷ ಪ್ರಸಿದ್ಧಿ ಪಡೆಯಿತು. ಇಂದಿಗೂ ಇಂಗ್ಲೆಂಡ್ ಮತ್ತು ಅಮೆರಿಕಗಳ ಏಕೇಶವಾದ ಒಂದು ಪ್ರಮುಖ ಧಾರ್ಮಿಕ ಶಕ್ತಿಯಾಗಿದೆ.

ಬಾಹ್ಯ ಸಂಪರ್ಕಗಳು

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: