ಕ್ರಿಪ್ಟೋಕರೆನ್ಸಿ

ಕ್ರಿಪ್ಟೋಕರೆನ್ಸಿ - ಇದು ಡಿಜಿಟಲ್ ಹಣ. ಕೈನಲ್ಲಿ ಹಿಡಿಯುವ ಕರೆನ್ಸಿ ನೋಟ್ ನ ಹಾಗೆ ಭೌತಿಕ ರೂಪದಲ್ಲಿ ಅದು ಇರುವುದಿಲ್ಲ. ಬದಲಾಗಿ ಡಿಜಿಟಲ್ ಹಣದ ರೂಪದಲ್ಲಿ ಧಾರಕನ ಖಾತೆಯಲ್ಲಿ ಇರುತ್ತದೆ.

ಸುರಕ್ಷತೆ

ಈ ಕ್ರಿಪ್ಟೋಕರೆನ್ಸಿಯನ್ನು ಕದಿಯಲು ಸಾಧ್ಯವಾಗದ ರೀತಿಯಲ್ಲಿ ‘ಬ್ಲಾಕ್‌ ಚೈನ್’ ಎಂಬ ತಂತ್ರಜ್ಞಾನ ಬಳಸಿ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ.

ಚಲಾವಣೆ

ಕ್ರಿಪ್ಟೋಕರೆನ್ಸಿಯನ್ನು ಹಣದ ರೀತಿ ಚಲಾವಣೆ ಮಾಡಬಹುದು. ಹಣಕಾಸು ಪಾವತಿ ವ್ಯವಹಾರ ನಡೆಸೋದಕ್ಕೆ ಟೋಕನ್ ಪದ್ದತಿ ಇರುತ್ತದೆ. ಈ ವ್ಯವಹಾರವನ್ನು ದಾಖಲು ಮಾಡಿಕೊಳ್ಳುವ ಪದ್ದತಿಯೂ ಇದೆ. ಈ ದಾಖಲಾತಿಗಳನ್ನು ನಾಶವಾಗದಂತೆ, ಅಳಿಸಿ ಹೋಗದಂತೆ ರಕ್ಷಿಸಿ ಇಡಲು ಹಲವು ಡಿಜಿಟಲ್ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ.

ಇಬ್ಬರು ವ್ಯಕ್ತಿಗಳ ನಡುವೆ ಹಣಕಾಸು ವಹಿವಾಟು, ಹಣ ವರ್ಗಾವಣೆ ಸುಲಲಿತವಾಗಿ ನಡೆಸಲು ಕ್ರಿಪ್ಟೋ ಕರೆನ್ಸಿ ಅತ್ಯುತ್ತಮ ಮಾರ್ಗ ಎಂದು ವಿಶ್ಲೇಷಿಸಲಾಗಿದೆ. ಬ್ಯಾಂಕ್, ಕ್ರೆಡಿಟ್ ಕಾರ್ಡ್‌ ಅಥವಾ ಯಾವುದೇ 3ನೇ ಸಂಸ್ಥೆಯ ನೆರವಿಲ್ಲದೆ ವ್ಯಕ್ತಿಗಳಿಬ್ಬರು ಹಣಕಾಸು ವಹಿವಾಟು ನಡೆಸಬಹುದು.

ಕ್ರಿಪ್ಟೋಕರೆನ್ಸಿಯನ್ನು ಬಳಕೆದಾರರು ತಮ್ಮ ಪರ್ಸ್‌ ರೀತಿ ಬಳಸಬಹುದು. ಇದರಲ್ಲಿ ವಹಿವಾಟು ನಡೆಸುವ ಮುನ್ನ ‘ಸಾರ್ವಜನಿಕ ಕೀ’ ರೂಪದಲ್ಲಿ ತಮ್ಮ ಅಕೌಂಟ್ ವಿಳಾಸ ನೀಡಬಹುದು, ‘ಪ್ರೈವೇಟ್ ಕೀ’ ರೂಪದಲ್ಲಿ ತಮ್ಮ ಸಹಿ ಬಳಸಹುದು. ಹಣ ವರ್ಗಾವಣೆ ಪ್ರಕ್ರಿಯೆಯು ಅತಿ ಕಡಿಮೆ ಮೊತ್ತಕ್ಕೆ ಮುಗಿಯುತ್ತದೆ. ಹಣಕಾಸು ವರ್ಗಾವಣೆ ವೇಳೆ ಬ್ಯಾಂಕ್‌ಗಳು ವಿಧಿಸುವ ದುಬಾರಿ ಸೇವಾ ಶುಲ್ಕವನ್ನು ಉಳಿಸಬಹುದಾಗಿದೆ.


ನಿರ್ವಹಣೆ

ಸಂಬಂಧಿಸಿದ ಕಂಪ್ಯೂಟರ್ ನೆಟ್‌ವರ್ಕ್‌ ಕೂಡಾ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಕರೆನ್ಸಿಯನ್ನು ವಿತರಿಸುವ ಹಲವು ಖಾಸಗಿ ಸಂಸ್ಥೆಗಳಿವೆ. ಆದರೆ,ಯಾವುದೇ ಸರ್ಕಾರವಾಗಲಿ, ಸರ್ಕಾರಿ ಸಂಸ್ಥೆಯಾಗಲಿ ಈ ವ್ಯವಹಾರ ನಡೆಸುವುದಿಲ್ಲ ಹಾಗೂ ಅದರಲ್ಲಿ ಭಾಗಿಯಾಗುವುದಿಲ್ಲ

ಕ್ರಿಪ್ಟೋಕರೆನ್ಸಿಗಳು

ಕ್ರಿಪ್ಟೋಕರೆನ್ಸಿಗಳ ಪೈಕಿ ಮೊದಲನೆಯದು ಬಿಟ್ ಕಾಯಿನ್. ಇದು ಇಂದಿಗೂ ಅತ್ಯಂತ ಜನಪ್ರಿಯವಾದ ಕ್ರಿಪ್ಟೋ ಕರೆನ್ಸಿ. ಜೊತೆಯಲ್ಲೇ ಸಾವಿರಾರು ಬಗೆಯ ಕ್ರಿಪ್ಟೋಕರೆನ್ಸಿಗಳು ಇದೀಗ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಆಲ್ಟ್‌ ಕಾಯಿನ್, ಲೈಟ್ ಕಾಯಿನ್, ಪೀರ್ ಕಾಯಿನ್, ನೇಮ್ ಕಾಯಿನ್ ಹೀಗೆ ಹಲವು ಕಂಪನಿಗಳಿವೆ.

ಅನಾನುಕೂಲಗಳು

ಅಕ್ರಮಗಳು, ವಂಚನೆಗಳು

ಕ್ರಿಪ್ಟೋ ಕರೆನ್ಸಿಗೆ ಯಾವುದೇ ಸರ್ಕಾರಿ ಮಾನ್ಯತೆ ಇಲ್ಲದ ಕಾರಣ, ಅಕ್ರಮ ಚಟುವಟಿಕೆಗಳು ನಡೆಯುವ ಭೀತಿ ಇರುತ್ತೆ. ಅಕ್ರಮ ಹಣ ವರ್ಗಾವಣೆ, ತೆರಿಗೆ ವಂಚನೆಗೆ ಕ್ರಿಪ್ಟೋ ಕರೆನ್ಸಿ ಬಳಕೆಯಾಗಬಹುದು. ಕ್ರಿಪ್ಟೋ ಕರೆನ್ಸಿ ಚಲಾವಣೆ ನಡೆಸುವ ಸಂಸ್ಥೆಗಳು ಈ ವಿಚಾರದಲ್ಲಿ ಸಾಕಷ್ಟು ನಿಗಾ ವಹಿಸುತ್ತವೆ. ಸರ್ಕಾರ ಬಯಸಿದಾಗ ಖಾಸಗಿ ವಹಿವಾಟಿನ ಮಾಹಿತಿ ನೀಡಬಹುದು.

ಬೆಲೆಯ ಏರಿಳಿತ

ಕ್ರಿಪ್ಟೋ ಕರೆನ್ಸಿಯ ಮಾರುಕಟ್ಟೆ ದರವು ಬೇಡಿಕೆ ಹಾಗೂ ಲಭ್ಯತೆ ಆಧಾರದ ಮೇಲೆ ಏರಿಳಿಕೆಯಾಗುತ್ತದೆ.ಪರಿಣಾಮವಾಗಿ, ಬೇಡಿಕೆ ಹೆಚ್ಚುಕಡಿಮೆ ಆದ ಹಾಗೆ ಅದರ ಬೆಲೆಯೂ ಹೆಚ್ಚು ಕಡಿಮೆ ಆಗುತ್ತದೆ.

ಹಣಕಾಸು ತಜ್ಞರು ಕ್ರಿಪ್ಟೋಕರೆನ್ಸಿಯನ್ನು ನೀರ ಮೇಲಿನ ಗುಳ್ಳೆಗೆ ಹೋಲಿಸುತ್ತಾರೆ.

ಭಾರತದಲ್ಲಿನ ಸ್ಥಿತಿ

ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಕ್ರಿಪ್ಟೊ ಕರೆನ್ಸಿ ಸಂಬಂಧ ಯಾವುದೇ ಸೇವೆ ನೀಡದಂತೆ ಸೂಚಿಸಿದ್ದ ಆರ್‌ಬಿಐ, ಕ್ರಿಪ್ಟೊ ಕರೆನ್ಸಿ ವ್ಯವಹಾರಗಳನ್ನು 2018ರ ಏಪ್ರಿಲ್‌ನಲ್ಲಿ ನಿಷೇಧಿಸಿತ್ತು. ಇದನ್ನು ಪ್ರಶ್ನಿಸಿ ಅನೇಕ ಅರ್ಜಿಗಳು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿದ್ದವು.


ಕ್ರಿಪ್ಟೊ ಕರೆನ್ಸಿ ವಹಿವಾಟಿನ ಮೇಲೆ ಎರಡು ವರ್ಷಗಳ ಹಿಂದೆ ರಿಸರ್ವ್‌ ಬ್ಯಾಂಕ್‌ ಹೇರಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್‌ 20 ಜುಲೈ 2021 ರಂದು  ತೆರವುಗೊಳಿಸಿದೆ. ಕ್ರಿಪ್ಟೊ ಕರೆನ್ಸಿ ವಹಿವಾಟು ಅಕ್ರಮ ಎನ್ನುವ ಆರ್‌ಬಿಐ ವಾದವನ್ನು ಸುಪ್ರೀಂ ಕೋರ್ಟ್‌ ತಳ್ಳಿ ಹಾಕಿದೆ.