ನಯಾಗರಾ ಜಲಪಾತ | |
---|---|
ಸ್ಥಳ | Border of ಆಂಟೇರಿಯೋ, ಕೆನಡಾ, & ನ್ಯೂಯಾರ್ಕ್, ಅಮೆರಿಕ ಸಂಯುಕ್ತ ಸಂಸ್ಥಾನ |
ನಿರ್ದೇಶಾಂಕಗಳ | 43°04′48″N 79°04′29″W / 43.0799°N 79.0747°W |
ಬಗೆ | Cataract |
ಒಟ್ಟು ಉದ್ದ | 167 ft (51 m) |
ಒಟ್ಟು ಪ್ರಪಾತಗಳು | 3 |
ಸೇರುವ ನದಿ | ನಯಾಗರ ನದಿ |
ಸರಾಸರಿ ಹರಿಯುವ ವೇಗ | 85,000 cu ft/s (2,400 m3/s) |
ನಯಾಗರ ಫಾಲ್ಸ್, [೧](Niagara Falls) (/naɪˈæɡrə/) ಅಮೆರಿಕ ಸಂಯುಕ್ತ ಸಂಸ್ಥಾನ, ಮತ್ತು ಕೆನಡಾ ದೇಶಗಳ ಅತಿದೊಡ್ಡ ಮತ್ತು ಅತ್ಯಂತ ಸುಂದರ ಜಲಪಾತ. ಈ ಜಲಪಾತ ಎರಡು ದೇಶಗಳಲ್ಲಿ ಹರಡಿಕೊಂಡಿದೆ. ಜಲಪಾತದ ಒಂದು ಭಾಗದಲ್ಲಿ ಅಮೆರಿಕ ಇನ್ನೊಂದು ತುದಿಯಲ್ಲಿ ಕೆನಡ. ಇವೆರಡರ ಮಧ್ಯೆ ನಯಾಗರ ನದಿ ಹರಿಯುತ್ತದೆ. ಅಮೆರಿಕದ ಈರಿ ಸರೋವರ ಮತ್ತು ಕೆನಡದ ಒಂಟಾರಿಯೋ ಸರೋವರಗಳ ಮಧ್ಯೆ ಇರುವ ಸಣ್ಣ ನಯಾಗರ ನದಿ, ಈ ಅದ್ಭುತ ಜಲಪಾತ ಸೃಷ್ಟಿಸಿದೆ. ನಯಾಗರ ಮೂರು ಜಲಪಾತಗಳನ್ನು ಹೊಂದಿದೆ.
ಅಂತಾರಾಷ್ಟ್ರೀಯ ಸೀಮಾರೇಖೆಯನ್ನುಮೊದಲು 'ಹಾರ್ಸ್ ಶೂ ಫಾಲ್ಸ್' ಕಡೆಯಿಂದ ೧೮೧೯ ರಲ್ಲಿ ಎಳೆದು ನಿರ್ಧಾರಮಾಡಿದ ಜಾಗವನ್ನು ಎರಡೂ ಕಡೆಯವರು ಒಪ್ಪಿಕೊಳ್ಳುತ್ತಿಲ್ಲ. ಸ್ವಾಭಾವಿಕ ಭೂಕುಸಿತ ಮತ್ತು ನೀರಿನ ಕೊರೆತಗಳಿಂದ ಕೊಚ್ಚಿಹೋದ ಭೂಮಿಯ ಬಗ್ಗೆ ಮತ್ತು ಕಟ್ಟಡನಿರ್ಮಾಣದಿಂದ ಆಗಿರುವ ಆಕ್ರಮಣಗಳಿಂದ ಅಲ್ಲಿನ ಜನಕ್ಕೆ ಸಮಾಧಾನ ಸಿಕ್ಕದೆ, ಆ ಜಾಗ ವಿವಾದದಲ್ಲಿದೆ.
[೪] ಜಲಪಾತಗಳ ಸಮೂಹವಾಗಿ ಕುದುರೆ ಲಾಳದಾಕಾರದಲ್ಲಿ ರಭಸದಿಂದ ಕೆಳಗೆ ಧುಮ್ಮಿಕ್ಕುವ ನೀರು ಹಾಲಿನ ಕಡಲಿನಂತೆ ವಿಶಾಲ. ಅಪಾರ ಜಲರಾಶಿ ನಿರಂತರವಾಗಿ ಭೋರ್ಗರೆಯುತ್ತಾ ಹಾರಿ ವೇಗವಾಗಿ ಕಿವಿಕಿವಿಡಾಗುವಂತೆ ಶಬ್ದಮಾಡುತ್ತಾ ನೆಗೆದು, ತಡವರಿಸುತ್ತಾ-ಎದ್ದು-ಬಿದ್ದು ಓಡಿಹೋಗುವ ನಿರಂತರ ನೋಟ, ಎಲ್ಲರನ್ನೂ ಚಕಿತಗೊಳಿಸುತ್ತದೆ.
ಕೆನಡ ಮತ್ತು ಉತ್ತರ ಅಮೆರಿಕಗಳನ್ನು ಬೇರ್ಪಡಿಸುವ ಈ 'ವಿಶ್ವ ಪ್ರಸಿದ್ಧ ಸುಂದರ ಜಲರಾಶಿ', ಕೆನಡಾ ಕಡೆ ಆಂಟಾರಿಯೋ ಮತ್ತು ಅಮೆರಿಕದ ನ್ಯೂಯಾರ್ಕ್ ನಗರಗಳ ಮಧ್ಯಭಾಗದಲ್ಲಿದೆ. ಪರ್ಯಟನೆಯ ದೃಷ್ಟಿಯಿಂದ ಇದನ್ನು ಮೂರು ವಿಭಾಗಗಳಾಗಿ ವಿಂಗಡಿಸುತ್ತಾರೆ.
ಮೇ ತಿಂಗಳ ಮಧ್ಯಭಾಗದಲ್ಲಿ ಈ ಜಲಪಾತ ಬಹಳ ಹೆಸರುವಾಸಿಯಾದದ್ದು. ಉತ್ತರ ಅಮೆರಿಕಾ ಮತ್ತು ಕೆನಡಾ ರಾಷ್ಟ್ರಗಳ ಕಡೆಯಿಂದ ಈ ಜಲಪಾತವನ್ನು ಚೆನ್ನಾಗಿ ವೀಕ್ಷಿಸಬಹುದು. 'ನೀಲಿಬಣ್ಣದ ರೇನ್ ಕೋಟ್' ಧರಿಸಿ ಗುಂಪುಗುಂಪಾಗಿ ಪರ್ಯಟಕರು 'ಬೋಟ್ ಯಾನ'ಮಾಡುತ್ತಾ ಜಲಪಾತದ ಬುಡದವರೆಗೂ ಹೋಗಿಬರಲು ಸಾಧ್ಯವಿದೆ. ಅಲ್ಲಿ ಮೈಗೆ ಮುತ್ತುವ ತುಂತುರು ಹನಿಗಳ, ಹಿಮಮಣಿಗಳ ಅದ್ಭುತ ಅನುಭವಗಳನ್ನು ಮೈತುಂಬಿಸಿಕೊಂಡು ಬರುತ್ತಾರೆ. ಹೃದಯದ ಬಡಿತ ನಿಲ್ಲುವಷ್ಟು, ಇಲ್ಲವೆ ಡವಡವಗುಟ್ಟಿಸುವಷ್ಟು ರೋಮಾಂಚಕಾರಿ ಅನುಭವ ಅನನ್ಯವಾದುದು.
ಬಹುತೇಕ ನೀರು ಕಾಲುವೆ ಮತ್ತು ಪೈಪ್ ಗಳ ಮುಖಾಂತರ ಹತ್ತಿರದ 'ಜಲವಿದ್ಯುತ್ ಸ್ಥಾವರ'ಕ್ಕೆ ಹಾಯಿಸಲಾಗುತ್ತದೆ. ವಿಶ್ವದ ಶೇಕಡಾ ೨೦% ರಷ್ಟು ಸಿಹಿನೀರು ಈ ಪ್ರದೇಶದ್ಸ ಮೇಲೆ ಹರಿದು ಬರುವ ನದಿಗಳು ಜಲಪಾತಕ್ಕೆ ಒದಗಿಸುತ್ತವೆ. 'ಗೈಡ್ ವ್ಯವಸ್ಥೆ' ಅತ್ಯುತ್ತಮವಾಗಿದೆ. ಸ್ಕೂಲ್ ಮಾಸ್ತರಣಿಯೋರ್ವಳು ಪೀಪಾಯಿನಲ್ಲಿ ಕುಳಿತು ಜಲಪಾತದ ಮೇಲಿನಿಂದ ಕೆಳಗೆ ಸಾಗಿ ಬದುಕಿ ಬಂದ ಬಗ್ಗೆ ವಿವರಣೆ ಸಿಗುತ್ತದೆ. ಜಲಪಾತದ ಅತಿ ಅಗಲವಾದ ಹರಿವು ನಿಮಿಷಕ್ಕೆ ೬ ಮಿಲಿಯನ್ ಘನ ಅಡಿಯಷ್ಟು ನೀರು ಒಂದೇಸಮನೆ ಭೋರ್ಗರೆಯುತ್ತಾ ಕೆಳಗೆ ಧುಮ್ಮಿಕ್ಕಿ ಓಡುತ್ತದೆ. ಜಲಪಾತದ ಬಳಿ, ಮನರಂಜನೀಯ ಹಾಗೂ ಅತ್ಯಂತ ರುದ್ರರಮಣೀಯ ದೃಶ್ಯಗಳನ್ನು ಕಾಣಬಹುದು. ವಿದ್ಯುತ್ ಸ್ಥಾವರದ ಜೊತೆಗೆ, ಔದ್ಯೋಗಿಕ ಮತ್ತು ಕೈಗಾರಿಕ ಕೇಂದ್ರವೆಂದು ಹೆಸರುಪಡೆದಿದೆ. 'ಮಧುಚಂದ್ರ'ಕ್ಕೆ ಇದು ಹೇಳಿಮಾಡಿಸಿದ ತಾಣ. ಇಲ್ಲಿಗೆ ಮದುವೆಯಾಗುವ ನೆವದಿಂದಲೇ ಬಂದವರ ಸಂಖ್ಯೆ ಅಪಾರ. ಯಾವ ಖರ್ಚುವೆಚ್ಚವಿಲ್ಲದೆ ಎರಡು ಹಾರ, ಇಲ್ಲವೇ 'ಪುಷ್ಪ ಗುಚ್ಛಗಳ ವಿನಿಮಯ'ದೊಂದಿಗೆ ಈಡೇರುವ ಮದುವೆಗಳು ಸರ್ವೇ ಸಾಮಾನ್ಯವಾಗಿವೆ.
ಇದೇ ಹೆಸರಿನ ಒಂದು 'ಹಾಲಿವುಡ್ ನಿರ್ಮಿತ ಚಲನಚಿತ್ರ' ಸನ್ ೧೯೫೦ ರಲ್ಲಿ ನಿರ್ಮಿಸಲ್ಪಟ್ಟಿತ್ತು. ಇದರ ನಂತರ ಬೇಕಾದಷ್ಟು ಚಲನಚಿತ್ರ ನಿರ್ಮಾಪಕರು ಈ ತಾಣವನ್ನು ತಮ್ಮ ಚಿತ್ರಗಳಿಗೆ ಆರಿಸಿಕೊಂಡಿದ್ದಾರೆ. ಮನರಂಜನೆಗೆ ವಿಶೇಷ ವ್ಯವಸ್ಥೆಮಾಡಿದ ಪರ್ಯಟಕ ಸಂಸ್ಥೆಗಳು ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತು ಅತ್ಯಂತ ಯಶಸ್ವಿಯಾಗಿ ಸಹಾಯ ಕಲ್ಪಿಸುತ್ತವೆ.
'ಊಟ', 'ಬ್ರೆಕ್ ಫಾಸ್ಟ್', ಫಾಸ್ಟ್ ಫುಡ್ ಗಳಿಗೆ ಭಾರತವೂ ಸೇರಿದಂತೆ ಹಲವಾರು 'ರೆಸ್ಟಾರೆಂಟ್' ಗಳಿವೆ. ಅವರೆಲ್ಲಾ ಪರ್ಯಟಕರನ್ನು ತಮ್ಮ ವಾಹನಗಳಲ್ಲಿ ಕೂರಿಸಿಕೊಂಡು ತಮ್ಮ 'ಹೋಟೆಲ್' ಗಳಲ್ಲಿ ಊಟದ ವ್ಯವಸ್ಥೆಗಳನ್ನು ಒದಗಿಸಿದ ನಂತರ, ಅವರನ್ನು ಮತ್ತೆ 'ಜಲಪಾತ'ದ ಹತ್ತಿರಕ್ಕೆ ಕರೆತಂದು ಬಿಡುತ್ತಾರೆ. 'ಭಾರತೀಯ ಹೋಟೆಲ್ ಗಳ ಪರಿಚಾರಕರು' ಎಲ್ಲೆಡೆ ಸಿಗುತ್ತಾರೆ. ಅಂಗವಿಕಲರಿಗೆ, ಮಕ್ಕಳಿಗೆ, ವೃದ್ಧರಿಗೆ, ಹೆಣ್ಣುಮಕ್ಕಳಿಗೆ, ಮತ್ತು ಯುವಕರಿಗೆ, ಎಲ್ಲಾ ತರಹದ ಸೌಲಭ್ಯಗಳೂ ಯಾತ್ರಿಕರಿಗೆ ಲಭ್ಯವಿದೆ. ಕೆನಡಾದೇಶದ ಕಡೆ ಸ್ಥಾಪಿಸಲಾಗಿರುವ ಸ್ಕೈಲಾನ್ ಟವರ್ ನ ತಿರುಗುವ ಹೋಟೆಲ್ ನಲ್ಲಿ ಕುಳಿತು ಪೇಯ-ತಿಂಡಿ-ತಿನಸುಗಳನ್ನು ಮೆಲ್ಲುತ್ತಾ 'ನಯಾಗರ ಜಲಪಾತ'ವನ್ನು ವೀಕ್ಷಿಸುವ ಪರ್ಯಟಕರಿಗೆ ಒಂದು ವಿಹಂಗಮನೋಟವನ್ನು ಒದಗಿಸಿಕೊಡುತ್ತದೆ.