ಸಿಲಿಕಾನ್ ಆವರ್ತಕೋಷ್ಟಕದ ೪ಎ ಗುಂಪಿನ ೩ನೆಯ ಆವರ್ತದ ಒಂದು ಅಲೋಹ ಮೂಲಧಾತು. ಪ್ರತೀಕ Si. ಪರಮಾಣು ಸಂಖ್ಯೆ ೧೪. ಪರಮಾಣು ತೂಕ ೨೮.೦೯. ದ್ರವನಬಿಂದು ೧೪೦೭೦ಸೆ. ಕುದಿಬಿಂದು ೨೩೫೫೦ಸೆ. ಸಾಪೇಕ್ಷಸಾಂದ್ರತೆ ೨.೩. ಎಲೆಕ್ಟ್ರಾನ್ ವಿನ್ಯಾಸ 1s2 2s2 2p6 3s2 3p2. ಸಿಲಿಕaನ್-೨೮,೨೯ ಮತ್ತು ೩೦ ಸ್ಥಿರ ಹಾಗೂ ೨೭,೩೧ ಮತ್ತು ೩೨ ಅಸ್ಥಿರ ಸಮಸ್ಥಾನಿಗಳು. ಇದು ಆಮ್ಲಜನಕದ ನಂತರ ಭೂಮಿಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇರುವ ಮೂಲವಸ್ತು. ಭೂಪದರದಲ್ಲಿ ಸುಮಾರು ೨೮ ಶೇಕಡಾ ಸಿಲಿಕಾನ್ ಇದೆ ಎಂದು ಅಂದಾಜು. ಸಿಲಿಕಾನ್ ಭೂಮಿಯಲ್ಲಿ ಶುದ್ಧ ರೂಪದಲ್ಲಿ ದೊರೆಯುವುದಿಲ್ಲ. ಹೆಚ್ಚಾಗಿ ಮರಳಿನಲ್ಲಿ ಮುಖ್ಯ ವಸ್ತುವಾಗಿರುವ ಸಿಲಿಕ (ಸಿಲಿಕಾನ್ ಡೈ ಆಕ್ಸೈಡ್)ದ ರೂಪದಲ್ಲಿ ಹೇರಳವಾಗಿದೆ. ಜ್ವಾಲಾಮುಖಿಗಳ ಲಾವಾರಸವು ಈ ಸಿಲಿಕದ ದ್ರವ ರೂಪವಾಗಿದೆ. ಸಿಲಿಕಾನ್ ಅನ್ನು ೧೮೨೩ರಲ್ಲಿ ಸ್ವೀಡನ್ ದೇಶದ ಜೋನ್ಸ್ ಬೆರ್ಜೆಲಿಯಸ್ ಎಂಬ ವಿಜ್ಞಾನಿ ಕಂಡುಹಿಡಿದರು. ಸಿಲಿಕಾನ್ ಹಾಗೂ ಇದರ ಸಂಯುಕ್ತಗಳು ಗಾಜಿನ ತಯಾರಿಕೆಯಲ್ಲಿ, ವಿದ್ಯುನ್ಮಾನ (electronics) ಉಪಕರಣಗಳಲ್ಲಿ, ಟ್ರಾನ್ಸಿಸ್ಟರ್ ಗಳಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಲ್ಪಡುತ್ತಿದೆ.
ಇದು ಕಂದು ಬಣ್ಣದ ಪುಡಿ ಅಥವಾ ಕಡು ಬೂದು ಬಣ್ಣದ ಸ್ಫಟಿಕ, ಅರೆವಾಹಕ. ಸಂಯುಕ್ತಗಳಲ್ಲಿ ಇದರ ಉತ್ಕರ್ಷಣ ಸ್ಥಿತಿಗಳು: +೨ ಮತ್ತು +೪. ಅಧಿಕ ತಾಪದಲ್ಲಿ ಅನೇಕ ಪದಾರ್ಥಗಳೊಂದಿಗೆ ವರ್ತಿಸುತ್ತದೆ (ಉದಾ: ೪೦೦೦ಸೆ. ತಾಪದಲ್ಲಿ ಆಕ್ಸಿಜನಿನೊಂದಿಗೆ ವರ್ತಿಸಿ ಸಿಲಿಕವಾಗುತ್ತದೆ). ಕಾಸಿದಾಗ ಅನೇಕ ಆಕ್ಸೈಡುಗಳನ್ನು ಅಪಕರ್ಷಿಸುತ್ತದೆ. ಹೈಡ್ರೊಫ್ಲೋರಿಕಾಮ್ಲ ಮತ್ತು ನೈಟ್ರಿಕಾಮ್ಲಗಳ ಮಿಶ್ರಣದಲ್ಲಿ ವಿಲೇಯ. ಕ್ಷಾರಗಳಲ್ಲಿ ಅತಿವೇಗದಲ್ಲಿ ಲೀನಿಸಿ ಹೈಡ್ರೊಜನ್ ಬಿಡುಗಡೆ. ಸಿಲಿಕೈಡುಗಳು, ಹ್ಯಾಲೈಡುಗಳು, ಆಕ್ಸೈಡುಗಳು, ಸಿಲಿಕೇಟುಗಳು, ಸಿಲಿಕೋನುಗಳು ಮುಂತಾದ ಅನೇಕ ಸಂಯುಕ್ತಗಳನ್ನು ರೂಪಿಸುತ್ತದೆ.
ಸಿಲಿಕಾನ್ ಸಂಯುಕ್ತಗಳನ್ನು ಹಲವಾರು ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಇಲ್ಲಿ ಕೆಲವನ್ನು ಕೊಡಲಾಗಿದೆ.
ಸಿಲಿಕಾನ್ ಎರಡು ಬಹು ರೂಪಗಳಲ್ಲಿ ದೊರೆಯುತ್ತದೆ:
ಚೆನ್ನಾಗಿ ಪುಡಿ ಮಾಡಿದ ಸಿಲಿಕಾವನ್ನು (ಮರಳು ಮತ್ತು ಕ್ವಾರ್ಟ್ಸ್) ಮೆಗ್ನೀಷಿಯಂ ಪುಡಿಯೊಂದಿಗೆ ಮಿಶ್ರಣ ಮಾಡಿ ಕಾವು-ಜೇಡಿ ಮೂಸೆಯಲ್ಲಿ ಕಾಯಿಸಿದಾಗ ಮೆಗ್ನೀಷಿಯಂ ಆಕ್ಸೈಡ್ ಮತ್ತು ಸಿಲಿಕಾನ್ ಉಂಟಾಗುತ್ತದೆ.
SiO₂ + 2Mg → Si + 2MgO
ಈ ಉತ್ವನ್ನವನ್ನು ದುರ್ಬಲ ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ತೊಳೆದು ಮೆಗ್ನೀಷಿಯಂ ಆಕ್ಸ್ಯಡ್ ನ್ನು ವಿಲೀನಗೊಳಿಸಲಾಗುತ್ತದೆ , ನಂತರ ಬದಲಾಗದ ಸಿಲಿಕಾನನ್ನು ತೆಗೆಯಲು ಹೈಡ್ರೋಕ್ಲೋರಿಕ್ ಆಮ್ಲದೊಂದಿಗೆ ತೊಳೆಯಲಾಗುತ್ತದೆ. ಉಳಿಯುವ ಪುಡಿಯೆ ಅಸ್ಫಟಿಕ ಸಿಲಿಕಾನ್. ಕೋಕ್ನೊಂದಿಗೆ ಸಿಲಿಕಾನನ್ನು ಅಪಕರ್ಷಿಸಿ ಕಡಿಮೆ ಶುದ್ದ ಸಿಲಿಕಾನನ್ನು ಪಡೆಯಲಾಗುತ್ತದೆ. ಸಿಲಿಕಾನನ್ನು ಹೆಚ್ಚಿನ ಕೋಕ್ನೊಂದಿಗೆ ಕಾಯಿಸಿದಾಗ ತಿಳಿ ಹಳದಿ ಬಣ್ಣದ ಸಿಲಿಕಾನ್ ಸ್ಫಟಿಕ ರೂಪದಲ್ಲಿ ದೊರೆಯುತ್ತದೆ.
SiO₂ + 2C → Si + 2CO ↑
ಭೌತಗುಣಗಳು: ಅಸ್ಪಟಿಕ ಸಿಲಿಕಾನ್ ಕಡು ಕಂದು ಬಣ್ಣದ ಪುಡಿಯಾಗಿದ್ದು ನೀರಿನಲ್ಲಿ ವಿಲೀನವಾಗುವುದಿಲ್ಲ. ಸ್ಪಟಿಕ ಸಿಲಿಕಾನ್ ತೆಳು ಹಳದಿ ಬಣ್ಣದ ಹರಳುಗಳ ರೂಪದಲ್ಲಿದ್ದು ವಜ್ರದೊಂದಿಗೆ ರಚನಾ ಸಾಮ್ಯತೆ ಹೊಂದಿದೆ. ಇದರ ಹರಳುಗಳು ಗಾಜನ್ನು ಗೀರುವ, (scratch) ಸಾಮರ್ಥ್ಯ ಹೋಂದಿವೆ. ಇದರ ದ್ರವನ ಬಿಂದು 1683 kಮತ್ತು ಕುದಿಯುವ ಬಿಂದು 2628k.
ಸಿಲಿಕಾನ್ ಅಲೋಹವಾದರೂ ಕೂಡ ಒಂದು ಅರೆವಾಹಕ.
ರಾಸಾಯನಿಕ ಗುಣಗಳು:ಅಸ್ಪಟಿಕ ಸಿಲಿಕಾನ್ ಸ್ಪಟಿಕ ರೂಪಕ್ಕಿಂತ ಹೆಚ್ಚು ಪಟುತ್ವ ಹೊಂದಿವೆ.
ಸಿಲಿಕಾನ್ ಗಾಳಿಯಲ್ಲಿ ಪ್ರಕಾಶಮಾನವಾಗಿ ಮತ್ತು ಆಕ್ಸಿಜನ್ನಲ್ಲಿ ಕ್ಷಿಪ್ರವಾಗಿ ಉರಿದು ಸಿಲಿಕಾನ್ ಡೈಯಾಕ್ಸೈಡ್ ಉತ್ಪತ್ತಿಯಾಗುತ್ತದೆ.
Si + O₂ → SiO₂
ಸಿಲಿಕಾನ್ ನೀರಿನೋಂದಿಗೆ ವರ್ತಿಸುವುದಿಲ್ಲ. ಆದರೆ, ಕೆಂಪಾಗಿ ಕಾಯ್ದಾಗ ನೀರಾವಿಯನ್ನು ವಿಭಜಿಸಿ ಹೈಡುರೋಜನನ್ನು ಬಿಡುಗಡೆ ಮಾಡುತ್ತದೆ.
Si + 2H₂O → SiO₂ + 2H₂
ಸಿಲಿಕಾನ್ ಮತ್ತು ಕೋಕ್ನ ಮಿಶ್ರಣವನ್ನು ವಿದ್ಯುತ್ ಕುಲುಮೆಯಲ್ಲಿ ಸುಮಾರು 3073 K ಗೆ ಕಾಯಿಸಿದಾಗ ಸಿಲಿಕಾನ್ ಕಾರ್ಬೈಡ್ ಉತ್ಪತ್ತಿಯಾಗುತ್ತದೆ.
Si + C → SiC
ಸಿಲಿಕಾನ್ ಒಂದು ಅಂತರ್ ಅರೆವಾಹಕ. ಇದು ನಿರಪೇಕ್ಷ ಸೊನ್ನ (0.k) ತಾಪದಲ್ಲಿ ನಿರೋಧಕವಾಗಿ ವರ್ತಿಸುತ್ತದೆ. ಏಕೆಂದರೆ ಎಲ್ಲಾ ಇಲೆಕ್ಟ್ರಾನ್ಗಳು ಪರಮಾಣುಗಳಿಗೆ ಬಂಧಿಸಲ್ಪಟ್ಟಿರುತ್ತವೆ. ಸರಿ ಸುಮಾರು 300k ಇರುವ ಕೊಠಡಿ ಉಷ್ಣತೆಯಲ್ಲಿ ಕೋವಲೆಂಟ್ ಬಂಧವು ಒಡೆಯಲ್ಪಟ್ಟು ಇಲೆಕ್ಟ್ರಾನ್ ಅಸ್ಥಾನಿಕವಾಗುತ್ತದೆ. ಹೀಗೆ ಸಿಲಿಕಾನ್ ಅಂತರ್ ಅರೆವಾಹಕವಾಗುತ್ತದೆ.
ಡೋಪಿಂಗ್ (Doping) ಎಂದು ಕರೆಯಲ್ಪಡುವ ವಿಧಾನದಿಂದ ಸಿಲಿಕಾನ್ನ ವಾಹಕತ್ವವನ್ನು ಹೆಚ್ಚಿಸಬಹುದು.
ಸಿಲಿಕಾನ್ ತನ್ನ ಪರಮಾಣೂವಿನ ಅತ್ಯಂತ ಹೊರ ಕವಚದಲ್ಲಿ ನಾಲ್ಕು ಇಲೆಕ್ಟ್ರಾನ್ಗಳನ್ನು ಹೊಂದಿದೆ. ರಂಜಕದಂತಹ 15ನೇ ಗುಂಪಿನ ಧಾತು ಒಂದರಿಂದ ಡೋಪಿಂಗ್ ಮಾಡಿದಾಗ ಐದು ಇಲೆಕ್ಟ್ರಾನ್ಗಳು ಒದಗುತ್ತವೆ. ಇವುಗಳ ಪೈಕಿ ನಾಲ್ಕು ಇಲೆಕ್ಟ್ರಾನ್ಗಳು ಅಕ್ಕಪಕ್ಕ ನಾಲ್ಕು ಸಿಲಿಕಾನ್ ಪರಮಾಣೂಗಳ ಜೊತೆ ಕೋವೆಲೆಂಟ್ ಬಂಧುಗಳನ್ನು ಏರ್ಪಡಿಸುತ್ತವೆ. ಐದನೆಯ ಇಲೆಕ್ಟ್ರಾನ್ ಸಿಲಿಕಾನ್ನ ವಿದ್ಯುತ್ಪವಾಹಕತೆಯನ್ನು ಹೆಚ್ಚಿಸುತ್ತದೆ. ಈ ರೀತಿಯಾಗಿ 15ನೇ ಗುಂಪಿನ ಧಾತುವು ಸಿಲಿಕಾನನ್ನು n – ವಿಧದ ಅರೆವಾಕವನ್ನಾಗಿಸುತ್ತದೆ.
ಬೋರಾನ್ನಂತಹ 13ನೇ ಗುಂಪಿನ ಧಾತು ಒಂದನ್ನು ಸಿಲಿಕಾನ್ಗೆ ಸೇರಿಸಿದಾಗ, ಅದು ಮೂರು ಇಲೆಕ್ಟ್ರಾನ್ಗಳುನ್ನು ಒದಗಿಸುತ್ತದೆ. ಈ ಮೂರು ಇಲೆಕ್ಟ್ರಾನ್ಗಳು ಅಕ್ಕ ಪಕ್ಕದ ನಾಲ್ಕು ಸಿಲಿಕಾನ್ ಪರಮಾಣುಗಳಲ್ಲಿ ಮೂರರ ಜೊತೆ ಕೋವೆಲೆಂಟ್ ಬಂಧ ಉಂಟಾಗಲು ಒಂದು ಇಲೆಕ್ಟ್ರಾನ್ನ ಕೊರತೆ ಉಂಟಾಗುತ್ತದೆ. ಈ ಕೊರತೆಯನ್ನು ಧನ ವಿದ್ಯುದಾವೇಶ ಎಂದು ಭಾವಿಸಿ ರಂಧ್ರ ಎಂದು ಪರಿಗಣಿಸಲಾಗುತ್ತದೆ. ಈ ರೀತಿಯಾಗಿ 13ನೇ ಗುಂಪಿನ ಧಾತುವು ಸಿಲಿಕಾನನ್ನು p- ವಿಧದ ಅರೆವಾಕವನ್ನಾಗಿಸುತ್ತದೆ.[೫]