Hippocrates of Kos | |
---|---|
Born | ca. ೪೬೦ BC |
Died | ca. ೩೭೭ BC (aged around ೮೩) |
Other names | Greek: Ἱπποκράτης |
Occupation | Physician |
ಹಿಪಾಕ್ರಟೀಸ್ ಆಫ್ ಕಾಸ್ (ಸು. ಕ್ರಿ.ಪೂ. ೪೬೦ – ಸು. ಕ್ರಿ.ಪೂ. ೩೭೦) - ಗ್ರೀಕ್: {{|Ἱπποκράτης}}; ಹಿಪಾಕ್ರಟೀಸ್ ಎಂಬುವವನು ಪೆರಿಕಲ್ಸ್ ಯುಗಕ್ಕೆ (ಪ್ರಾಚೀನ ಅಥೆನ್ಸ್) ಸಂಬಂಧಿಸಿದ ಪ್ರಾಚೀನ ಗ್ರೀಕ್ ವೈದ್ಯನಾಗಿದ್ದಾನೆ. ಅಲ್ಲದೇ ಇವನನ್ನು ವೈದ್ಯಕೀಯ ಇತಿಹಾಸದಲ್ಲಿ ಮಹೋನ್ನತ ವ್ಯಕ್ತಿ ಎಂದು ಪರಿಗಣಿಸಲಾಗಿದೆ. ಇವನನ್ನು ವೈದ್ಯಶಾಸ್ತ್ರದ ಪಾಶ್ಚಿಮಾತ್ಯ ಪಿತಾಮಹ[೨][೩][೪] ನೆಂದು ಕರೆಯಲಾಗುತ್ತದೆ. ವೈದ್ಯಶಾಸ್ತ್ರದ ಹಿಪೊಕ್ರೆಟಿಕ್ ಪಂಥವನ್ನು ಸ್ಥಾಪಿಸುವ ಮೂಲಕ ಈ ಕ್ಷೇತ್ರಕ್ಕೆ ಅವನ ಶಾಶ್ವತ ಕೊಡುಗೆಗಳನ್ನು ಗುರುತಿಸಿ ಈ ಮನ್ನಣೆ ನೀಡಲಾಗಿದೆ. ಈ ಬೌದ್ಧಿಕ ಶಾಲೆಯು, ಪ್ರಾಚೀನ ಗ್ರೀಸ್ನ ವೈದ್ಯಶಾಸ್ತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯನ್ನುಂಟುಮಾಡಿತು. ಸಾಂಪ್ರದಾಯಿಕವಾಗಿ ಸಂಬಂಧ ಹೊಂದಿದ್ದ ಇತರ ಕ್ಷೇತ್ರಗಳಿಗಿಂತ ಇದನ್ನು ಭಿನ್ನವಾದ ಶಿಕ್ಷಣ ವಿಷಯವಾಗಿ ಸ್ಥಾಪಿಸಲಾಯಿತು. (ಗಣನೀಯವಾಗಿ ಮಾಟಮಂತ್ರ ಮತ್ತು ತತ್ತ್ವಶಾಸ್ತ್ರ), ಈ ರೀತಿಯಾಗಿ ವೈದ್ಯಶಾಸ್ತ್ರವನ್ನು ವೃತ್ತಿಯಾಗಿಸಿದ.[೫][೬]
ಆದರೂ, ಗ್ರಂಥ ಸಂಗ್ರಹದ ಬರಹಗಾರರ ಸಾಧನೆಗಳು, ಹಿಪಾಕ್ರಟಿಕ್ ವೈದ್ಯಶಾಸ್ತ್ರದ ವೃತ್ತಿಗಾರರು, ಮತ್ತು ಸ್ವತಃ ಹಿಪಾಕ್ರಟೀಸ್ನ ಕಾರ್ಯಗಳು ಹಲವುವೇಳೆ ಸಂಮಿಶ್ರಿತವಾಗಿವೆ; ಆದ್ದರಿಂದ ಹಿಪಾಕ್ರಟೀಸ್ ಏನನ್ನು ಯೋಚಿಸಿದ್ದ, ಬರೆದ ಮತ್ತು ಮಾಡಿದ ಎಂಬುದರ ಬಗ್ಗೆ ಸ್ವಲ್ಪ ಮಟ್ಟಿಗೆ ಮಾತ್ರ ತಿಳಿದಿದೆ. ಆದಾಗ್ಯೂ, ಹಿಪಾಕ್ರಟೀಸ್ನನ್ನು ಸಾಮಾನ್ಯವಾಗಿ ಪ್ರಾಚೀನ ವೈದ್ಯನ ಮಾದರಿ ಎಂಬಂತೆ ಚಿತ್ರಿಸಲಾಗುತ್ತದೆ. ವಿಶೇಷವಾಗಿ, ಅವನು ಪ್ರಾಯೋಗಿಕ ವೈದ್ಯಶಾಸ್ತ್ರದ ಕ್ರಮಬದ್ಧವಾದ ಅಧ್ಯಯನವನ್ನು ಅಭಿವೃದ್ಧಿಪಡಿಸಿದ ಹಿರಿಮೆಗೆ ಪಾತ್ರನಾಗಿದ್ದಾನೆ. ಮುಂಚಿನ ಪಂಥಗಳ ಚಿಕಿತ್ಸಾ ಜ್ಞಾನವನ್ನು ಒಟ್ಟಿಗೆ ಸೇರಿಸುವ ಮೂಲಕ ಮತ್ತು ಹಿಪಾಕ್ರಟಿಕ್ ಪ್ರಮಾಣ, ಗ್ರಂಥ ಸಂಗ್ರಹ ಹಾಗೂ ಇತರ ಕೆಲಸಗಳ ಮೂಲಕ ವೈದ್ಯರಿಗೆ ವೃತ್ತಿಯನ್ನು ಅಭ್ಯಸಿಸಲು ವಿಧಿಸಿದನು.[೫][೭] ಈತ ಹೇಳಿದ ಎರಡು ಸೂತ್ರವಾಕ್ಯಗಳಿವು: “ಉಗ್ರವ್ಯಾಧಿಗೆ ಉಗ್ರಚಿಕಿತ್ಸೆ ಅಗತ್ಯ” ಮತ್ತು “ಒಬ್ಬನ ಉಣಿಸು ಇನ್ನೊಬ್ಬನ ಗರಳ.”
ಹಿಪಾಕ್ರಟೀಸ್ ತನ್ನ ತಂದೆ ಮತ್ತು ಅಜ್ಜನಿಂದ ವೈದ್ಯಕೀಯವನ್ನು ಕಲಿತುಕೊಂಡನು ಹಾಗೂ ಇತರ ವಿಷಯಗಳನ್ನು ಡೆಮೊಕ್ರಿಟಸ್ ಮತ್ತು ಜಾರ್ಜಿಯಸ್ನೊಂದಿಗೆ ಅಧ್ಯಯನ ಮಾಡಿದನು. ಹಿಪಾಕ್ರಟೀಸ್ ಬಹುಶಃ ಕಾಸ್ನಲ್ಲಿರುವ ಆಸ್ಕ್ಲೆಪಿಯನ್ ದೇವಾಲಯದಲ್ಲಿ ತರಬೇತಿ ಪಡೆದನು. ಅಲ್ಲದೇ ಥ್ರೇಸಿಯನ್ ವೈದ್ಯನಾದ ಸೆಲಿಂಬ್ರಿಯಾದ ಹೆರೊಡಿಕಸ್ ಎಂಬುವವನಿಂದ ಪಾಠಗಳನ್ನು ಕಲಿತುಕೊಂಡನು. ಪ್ಲೇಟೋನ ಸಂಭಾಷಣೆಯಾದ ಪ್ರೊಟೊಗೊರಸ್, ಹಿಪಾಕ್ರಟೀಸ್ನನ್ನು ಹೆಸರಿಸುವ ಏಕಮಾತ್ರ ಸಮಕಾಲೀನ ಉದಾಹರಣೆಯಾಗಿದೆ. ಇದರಲ್ಲಿ ಪ್ಲೇಟೋ ಹಿಪಾಕ್ರಟೀಸ್ನನ್ನು "ಕಾಸ್ನ ಹಿಪಾಕ್ರಟೀಸ್, ದಿ ಆಸ್ಕ್ಲೀಪೈಡ್" ಎಂದು ವಿವರಿಸಿದ್ದಾನೆ.[೧೩][೧೪] ಹಿಪಾಕ್ರಟೀಸ್ ಜೀವನ ಪೂರ್ತಿ ವೈದ್ಯಶಾಸ್ತ್ರವನ್ನು ಬೋಧಿಸಿದನು ಮತ್ತು ಅಭ್ಯಾಸ ಮಾಡಿದನು. ಅಲ್ಲದೇ ಥೆಸ್ಸಲಿ, ಥ್ರೇಸ್, ಮತ್ತು ಮ್ಯಾರ್ಮರ ಸಮುದ್ರದಷ್ಟು ದೂರ ಪ್ರಯಾಣ ಬೆಳೆಸಿದ್ದಾನೆ.[೧೨] ಬಹುಶಃ ಅವನು ೮೩ ಅಥವಾ ೯೦ ವರ್ಷದವನಿದ್ದಾಗ ಲ್ಯಾರಿಸ್ಸಾದಲ್ಲಿ ಮೃತನಾದನು. ಆದರೂ ಕೆಲವು ಮೂಲಗಳು ಅವನು ಸುಮಾರು ೧೦೦ ವರ್ಷಗಳವರೆಗೆ ಬದುಕಿದ್ದನು ಎಂದು ಹೇಳುತ್ತವೆ; ಅವನ ಸಾವಿನ ಬಗ್ಗೆ ಅನೇಕ ವಿವರಣೆಗಳಿವೆ.[೧೨]
On the Sacred Disease[೧೫]
ಹಿಪಾಕ್ರಟೀಸ್, ಕಾಯಿಲೆಗಳು ಸಹಜವಾಗಿ ಬರುತ್ತವೇ ಹೊರತು ಮೂಢನಂಬಿಕೆ ಮತ್ತು ದೇವರುಗಳ ಫಲವಾಗಿ ಬರುವುದಿಲ್ಲ ಎಂದು ನಂಬಿದ ಮೊದಲನೆಯ ವ್ಯಕ್ತಿಯೆಂಬ ಹಿರಿಮೆಗೆ ಪಾತ್ರನಾಗಿದ್ದಾನೆ. ಹಿಪಾಕ್ರಟೀಸ್, ತತ್ತ್ವಶಾಸ್ತ್ರ ಮತ್ತು ವೈದ್ಯಕೀಯವನ್ನು ಒಟ್ಟಿಗೆ ಸೇರಿಸಿದ್ದರಿಂದಪೈಥಾಗರಸ್ನ ಅನುಯಾಯಿಗಳಿಂದ ಮನ್ನಣೆ ಪಡೆದುಕೊಂಡನು.[೧೬] ಅವನು, ಕಾಯಿಲೆಗಳು ದೇವರು ಕೊಟ್ಟ ಶಿಕ್ಷೆಯಲ್ಲ, ಅವು ಪರಿಸರಕ್ಕೆ ಸಂಬಂಧಿಸಿದ ಅಂಶಗಳಿಂದ, ಆಹಾರ ಕ್ರಮದಿಂದ, ಜೀವನ ಕ್ರಮದಿಂದ ಬರುವಂತಹವುಗಳಾಗಿವೆ ಎಂದು ನಂಬುವ ಮೂಲಕ ಮತ್ತು ವಾದಿಸುವ ಮೂಲಕ ವೈದ್ಯಕೀಯದ ವಿಷಯವನ್ನು ಧರ್ಮದಿಂದ ಬೇರ್ಪಡಿಸಿದನು. ವಾಸ್ತವವಾಗಿ ಸಂಪೂರ್ಣ ಹಿಪಾಕ್ರಟಿಕ್ ಗ್ರಂಥ ಸಂಗ್ರಹದಲ್ಲಿ ಒಂದೇ ಒಂದು ಅತೀಂದ್ರಿಯ ರೋಗವನ್ನೂ ಹೆಸರಿಸಲಾಗಿಲ್ಲ. ಆದರೂ ಹಿಪಾಕ್ರಟೀಸ್, ರಸಧಾತು ಸಿದ್ಧಾಂತದಂತಹ ಸರಿಯಲ್ಲದ ಅಂಗರಚನಾ ಶಾಸ್ತ್ರ ಮತ್ತು ಶರೀರವಿಜ್ಞಾನವೆಂದು ಈಗ ತಿಳಿದಿರುವ ವಿಷಯಗಳ ಮೇಲೆ ಆಧಾರಿತವಾದ ಅನೇಕ ನಿಶ್ಚಿತಾಭಿಪ್ರಾಯಗಳೊಡನೆ ಕಾರ್ಯನಿರ್ವಹಿಸಿದ್ದಾನೆ.[೧೭][೧೮][೧೯]
ವೈದ್ಯಕೀಯದ ಪ್ರಾಚೀನ ಗ್ರೀಕ್ ಪಂಥಗಳನ್ನು ಕಾಯಿಲೆಗಳನ್ನು ಹೇಗೆ ನಿಭಾಯಿಸುವುದು ಎಂಬುದರ ಮೇಲೆ ವಿಂಗಡಿಸಲಾಯಿತು (ಕ್ನೈಡಿಯನ್ ಮತ್ತು ಕೋನ್ಗಳಾಗಿ). ಔಷಧ ವೈದ್ಯಶಾಸ್ತ್ರದ ಕ್ನೈಡಿಯನ್ ಪಂಥವು ರೋಗವನ್ನು ಪತ್ತೆ ಮಾಡುವುದರ ಮೇಲೆ ಹೆಚ್ಚು ಗಮನಹರಿಸಿತು. ಹಿಪಾಕ್ರಟೀಸ್ನ ಕಾಲದಲ್ಲಿ ವೈದ್ಯಶಾಸ್ತ್ರವು ಮಾನವನ ಅಂಗರಚನಾಶಾಸ್ತ್ರ ಮತ್ತು ಶರೀರವಿಜ್ಞಾನದ ಬಗ್ಗೆ ಏನನ್ನೂ ತಿಳಿದುಕೊಂಡಿರಲಿಲ್ಲ, ಏಕೆಂದರೆ ಗ್ರೀಸ್ನಲ್ಲಿ ಮಾನವನ ಅಂಗವಿಚ್ಛೇದನವನ್ನು ನಿಷೇಧಿಸಲಾಗಿತ್ತು. ಒಂದು ಕಾಯಿಲೆಯು ಸಂಭವವಿರುವ ಅನೇಕ ರೋಗ ಲಕ್ಷಣಗಳನ್ನು ಉಂಟುಮಾಡುತ್ತಿದ್ದುದರಿಂದ, ಕ್ನೈಡಿಯನ್ ಪಂಥವು ವ್ಯತ್ಯಾಸ ಮಾಡುವಲ್ಲಿ ವಿಫಲವಾಯಿತು.[೨೦] ಹಿಪಾಕ್ರಟಿಕ್ ಪಂಥ ಅಥವಾ ಕೋನ್ ಪಂಥವು ಸಾಮಾನ್ಯ ರೋಗ ನಿದಾನಗಳನ್ನು ಮತ್ತು ನಿಷ್ಕ್ರಿಯ ಚಿಕಿತ್ಸೆಗಳನ್ನು ಅನ್ವಯಿಸುವುದರ ಮೂಲಕ ಅತ್ಯಂತ ಯಶಸ್ಸನ್ನು ಗಳಿಸಿತು. ಇದು ರೋಗ ನಿದಾನದ ಬಗ್ಗೆ ಗಮನ ಹರಿಸದೆ, ರೋಗಿಯ ಆರೈಕೆ ಮತ್ತು ರೋಗದ ಮುನ್ನರಿವಿನ ಬಗ್ಗೆ ಗಮನಹರಿಸಿತು. ಇದು ಪರಿಣಾಮಕಾರಿಯಾಗಿ ರೋಗವನ್ನು ಗುಣಪಡಿಸುವುದಲ್ಲದೇ, ಪ್ರಾಯೋಗಿಕ ವೃತ್ತಿಯಲ್ಲಿ ಮಹತ್ತರವಾದ ಬೆಳವಣಿಗೆಗೆ ಅವಕಾಶ ಮಾಡಿಕೊಟ್ಟಿತು.[೨೧][೨೨]
ಹಿಪಾಕ್ರಟಿಕ್ ವೈದ್ಯಕೀಯಶಾಸ್ತ್ರ ಮತ್ತು ಅದರ ತತ್ತ್ವಶಾಸ್ತ್ರವನ್ನು ಆಧುನಿಕ ವೈದ್ಯಕೀಯಶಾಸ್ತ್ರದಿಂದ ಬಹಳ ಹಿಂದೆಯೇ ತೆಗೆದುಹಾಕಲಾಗಿದೆ. ಪ್ರಸ್ತುತದಲ್ಲಿ, ವೈದ್ಯನು ನಿರ್ದಿಷ್ಟವಾಗಿ ರೋಗವನ್ನು ನಿರ್ಧರಿಸುವುದರ ಮೇಲೆ ಹಾಗೂ ವಿಶೇಷ ಗುಣಲಕ್ಷಣವುಳ್ಳ ಚಿಕಿತ್ಸೆಯ ಮೇಲೆ ಗಮನಹರಿಸುತ್ತಿದ್ದಾನೆ. ಇವೆರಡನ್ನು ಕ್ನೈಡಿಯನ್ ಪಂಥವು ಅನುಸರಿಸಿತ್ತು. ಹಿಪಾಕ್ರಟೀಸ್ನ ದಿನದಿಂದ ವೈದ್ಯಕೀಯ ಚಿಂತನೆಯಲ್ಲಿ ಉಂಟಾದ ಸ್ಥಾನಪಲ್ಲಟವು ಕಳೆದ ಎರಡು ಸಹಸ್ರಮಾನಗಳಲ್ಲಿ ತೀವ್ರ ಟೀಕೆಯನ್ನು ಉಂಟುಮಾಡಿತು. ಹಿಪಾಕ್ರಟಿಕ್ ಚಿಕಿತ್ಸೆಯ ನಿಷ್ಕ್ರಿಯತೆಯು ತೀವ್ರ ಖಂಡನೆಗಳ ವಸ್ತುವಾಯಿತು. ಉದಾಹರಣೆಗೆ ಫ್ರೆಂಚ್ ವೈದ್ಯನಾದ ಎಂ. ಎಸ್. ಹೌಡಾರ್ಟ್, ಹಿಪಾಕ್ರಟಿಕ್ ಚಿಕಿತ್ಸೆಯನ್ನು "ಸಾವಿನ ಮೇಲೆ ಧ್ಯಾನಮಾಡುವುದು" ಎಂದು ಕರೆದಿದ್ದಾನೆ.[೨೩]
ಹಿಪಾಕ್ರಟಿಕ್ ಪಂಥವು ಎಲ್ಲಾ ರೋಗಗಳು ದೇಹದಲ್ಲಿ ನಾಲ್ಕು ರಸಧಾತುಗಳ ಅಸಮತೋಲನದಿಂದ ಬರುತ್ತವೆ ಎಂಬುದನ್ನು ಪ್ರತಿಪಾದಿಸಿತು - ಆರೋಗ್ಯದಲ್ಲಿರುವ ದ್ರವವು ಪ್ರಮಾಣದಲ್ಲಿ (ಪೆಪ್ಸಿಸ್) ಸಹಜವಾಗಿ ಸಮನಾಗಿರುತ್ತದೆ.[೨೪] ನಾಲ್ಕು ರಸಧಾತುಗಳಾದ, ರಕ್ತ, ಕರಿ ಪಿತ್ತರಸ, ಹಳದಿ ಪಿತ್ತರಸ ಮತ್ತು ಶ್ಲೇಷ್ಮಗಳು ಸಮತೋಲನ ಸ್ಥಿತಿಯಲ್ಲಿ (ಡೈಸ್ರೇಸಿಯ, ಇದರ ಅರ್ಥ "ಕೆಟ್ಟ ಮಿಶ್ರಣ") ಇಲ್ಲದಿದ್ದಾಗ, ವ್ಯಕ್ತಿಯು ರೋಗಕ್ಕೀಡಾಗಬಹುದು ಮತ್ತು ಈ ಸಮತೋಲನ ಹೇಗಾದರೂ ಮರುಸ್ಥಾಪನೆಯಾಗುವ ತನಕ ಇದೇ ಸ್ಥಿತಿ ಮುಂದುವರೆಯಬಹುದು. ಹಿಪಾಕ್ರಟಿಕ್ ಚಿಕಿತ್ಸೆಯು ಈ ಸಮತೋಲನದ ಮರುಸ್ಥಾಪನೆಯನ್ನು ನಿರ್ದೇಶಿಸುತ್ತದೆ. ಉದಾಹರಣೆಗೆ, ಶ್ಲೇಷ್ಮವು ಹೆಚ್ಚಾಗಿದ್ದಾಗ ನಿಂಬೆ ಜಾತಿಯ ಹಣ್ಣುಗಳನ್ನು ಬಳಸುವುದು ಲಾಭದಾಯಕವಾಗಿದೆ ಎನ್ನಲಾಗುತ್ತದೆ.[೨೫]
ವಿಷಮ ಸ್ಥಿತಿಯು ಹಿಪಾಕ್ರಟಿಕ್ ವೈದ್ಯಶಾಸ್ತ್ರದಲ್ಲಿರುವ ಮತ್ತೊಂದು ಪ್ರಮುಖ ಪರಿಕಲ್ಪನೆಯಾಗಿದೆ. ಇದು ರೋಗದ ಪ್ರಗತಿಯಲ್ಲಿ ಕಾಯಿಲೆಯು ಮಿತಿ ಮೀರಬಹುದು ಮತ್ತು ರೋಗಿಯು ಸಾವಿಗೀಡಾಗಬಹುದು ಅಥವಾ ವಿರುದ್ಧ ಪರಿಸ್ಥಿತಿ ಉಂಟಾಗಬಹುದು ಹಾಗೂ ಸಹಜ ಪ್ರಕ್ರಿಯೆಗಳು ರೋಗಿಯನ್ನು ಗುಣಮುಖವಾಗಿಸಬಹುದು ಎಂಬ ಬಿಂದುವಾಗಿದೆ. ವಿಷಮಸ್ಥಿತಿಯ ನಂತರ ರೋಗವು ಮರುಕಳಿಸಬಹುದು. ಇದರಿಂದಾಗಿ ಮತ್ತೊಂದು ನಿರ್ಧಾರಕ ವಿಷಮ ಸ್ಥಿತಿಯು ಬರಬಹುದು. ಸಿದ್ಧಾಂತದ ಪ್ರಕಾರ, ವಿಷಮ ಸ್ಥಿತಿಯು ವಿಷಮಾವಸ್ಥೆಯ ದಿನಗಳಲ್ಲಿ ಉಂಟಾಗುತ್ತದೆ. ಇದು ರೋಗ ಬಂದ ನಂತರ ಒಂದು ನಿರ್ದಿಷ್ಟ ಕಾಲದಲ್ಲಿ ಉಂಟಾಗಬಹುದು ಎಂದು ನಿರೀಕ್ಷಿಸಲಾಗಿರುತ್ತದೆ. ಒಂದು ವೇಳೆ ವಿಷಮಾವಸ್ಥೆಯ ದಿನಕ್ಕೆ ದೂರದ ದಿನದಲ್ಲಿ ವಿಷಮಸ್ಥಿತಿಯು ಉಂಟಾದರೆ, ರೋಗವು ಮರುಕಳಿಸಬಹುದು ಎಂದು ನಿರೀಕ್ಷಿಸಲಾಗುತ್ತದೆ. ಈ ಕಲ್ಪನೆಯು ಹಿಪಾಕ್ರಟೀಸ್ನೊಂದಿಗೆ ಹುಟ್ಟಿರಬಹುದಾಗಿದ್ದರೂ, ಇದು ಅವನಿಗಿಂತ ಮುಂಚೆಯೇ ಹುಟ್ಟಿರಬಹುದಾದ ಸಾಧ್ಯತೆಯಿದೆ.[೨೬]
ಹಿಪಾಕ್ರಟಿಕ್ ವೈದ್ಯಶಾಸ್ತ್ರವು ಸಾಧಾರಣ ಮತ್ತು ನಿಷ್ಕ್ರಿಯವಾಗಿತ್ತು. ಚಿಕಿತ್ಸಾಕ್ರಮವು "ಪ್ರಕೃತಿಯ ಗುಣಪಡಿಸುವ ಶಕ್ತಿ" ("ಲ್ಯಾಟಿನ್ನಲ್ಲಿ ವಿಸ ಮೆಡಿಕ್ಯಾಟ್ರಿಕ್ಸ್ ನೇಚರ್ ") ಯ ಮೇಲೆ ಆಧರಿತವಾಗಿತ್ತು. ಈ ಸಿದ್ಧಾಂತದ ಪ್ರಕಾರ, ದೇಹವು ಸ್ವಯಂ ನಾಲ್ಕು ರಸಧಾತುಗಳನ್ನು ಮರುಸಮತೋಲನಾ ಸ್ಥಿತಿಗೆ ತರುವ ಹಾಗು ಅದಾಗಿಯೇ ಗುಣವಾಗಬಲ್ಲ (ಫಿಸಿಸ್) ಶಕ್ತಿಯನ್ನು ಹೊಂದಿರುತ್ತದೆ.[೨೪] ಹಿಪಾಕ್ರಟಿಕ್ ಚಿಕಿತ್ಸೆಯು ಈ ಸಹಜವಾದ ಪ್ರಕ್ರಿಯೆಯನ್ನು ಸುಲಭವಾಗಿಸುವ ಕಡೆಗೆ ಹೆಚ್ಚು ಗಮನಹರಿಸಿದೆ. ಗುರಿಯನ್ನು ಸಾಧಿಸಲು, ಹಿಪಾಕ್ರಟೀಸ್, "ವಿಶ್ರಾಂತಿ ಮತ್ತು ಸ್ತಂಭನಗಳು ಪ್ರಮುಖ ಮಹತ್ವವನ್ನು ಹೊಂದಿವೆ" ಎಂದು ನಂಬಿದ್ದನು.[೨೭] ಸಾಮಾನ್ಯವಾಗಿ, ಹಿಪಾಕ್ರಟಿಕ್ ವೈದ್ಯಶಾಸ್ತ್ರವು ರೋಗಿಗೆ ಅತ್ಯಂತ ಕರುಣಾಮಯವಾಗಿತ್ತು; ಚಿಕಿತ್ಸೆಯು ಸೌಮ್ಯವಾಗಿತ್ತು ಹಾಗೂ ರೋಗಿಯನ್ನು ಸ್ವಚ್ಛವಾಗಿರಿಸುವುದರ ಕಡೆಗೆ ಹಾಗೂ ಕ್ರಿಮಿರಹಿತವಾಗಿ ಇಡುವ ಕಡೆಗೆ ಹೆಚ್ಚು ಮಹತ್ವವನ್ನು ನೀಡಿತ್ತು. ಉದಾಹರಣೆಗೆ, ಸ್ವಚ್ಛವಾದ ನೀರು ಅಥವಾ ವೈನ್ ಅನ್ನು ಮಾತ್ರ ಗಾಯಗಳ ಮೇಲೆ ಬಳಸಬೇಕಿತ್ತು. ಆದರೂ "ಶುಷ್ಕ" ಚಿಕಿತ್ಸೆಗೆ ಆದ್ಯತೆಯನ್ನು ನೀಡಬಹುದಾಗಿದೆ. ನೋವನ್ನು ಕಡಿಮೆಮಾಡುವ ಮುಲಾಮುಗಳನ್ನು ಕೆಲವೊಮ್ಮೆ ಬಳಸಲಾಗುತ್ತಿತ್ತು.[೨೮]
ಹಿಪಾಕ್ರಟೀಸ್ ಔಷಧಗಳನ್ನು ಬಳಸಲು ಹಾಗು ವಿಶೇಷವಾದ ಚಿಕಿತ್ಸೆಯಲ್ಲಿ ತೊಡಗಿಕೊಳ್ಳಲು ಹಿಂಜರಿಯುತ್ತಿದ್ದನು. ಇದು ತಪ್ಪು ಆಯ್ಕೆಯೆಂದು ರುಜುವಾತಾಯಿತು. ಸಾಮಾನ್ಯೀಕರಿಸಿದ ಚಿಕಿತ್ಸೆಯು ಸಾಮಾನ್ಯೀಕರಿಸಲಾದ ರೋಗ ನಿದಾನ ಕ್ರಮವನ್ನು ಅನುಸರಿಸಿತು.[೨೮][೨೯] ಆದರೂ, ಪರಿಣಾಮಕಾರಿಯಾದ ಔಷಧವನ್ನು ಕೆಲವೊಂದು ನಿರ್ದಿಷ್ಟ ಸಂದರ್ಭಗಳಲ್ಲಿ ಬಳಸಲಾಗುತ್ತಿತ್ತು.[೩೦] ಈ ಜಡ ಚಿಕಿತ್ಸಾಕ್ರಮವು ಮೂಳೆ ಮುರಿತದಂತಹ ಸರಳವಾದ ಅಸ್ವಸ್ಥತೆಗಳನ್ನು ಗುಣಪಡಿಸುವಲ್ಲಿ ಅತ್ಯಂತ ಯಶಸ್ವಿಯಾಯಿತು. ಇದಕ್ಕೆ ಅಸ್ಥಿ ವ್ಯವಸ್ಥೆಯನ್ನು ಎಳೆಯಲು ಹಾಗು ಗಾಯವಾದ ಸ್ಥಳದ ಮೇಲೆ ಒತ್ತಡವನ್ನು ಕಡಿಮೆ ಮಾಡಲು ಅಂಗಕರ್ಷಣದ ಅಗತ್ಯವಿರುತ್ತದೆ. ಹಿಪಾಕ್ರಟಿಕ್ ಬೆಂಚು ಮತ್ತು ಇತರ ಸಾಧನಗಳನ್ನು ಈ ಗುರಿಸಾಧನೆಗೆ ಬಳಸಲಾಗುತ್ತದೆ.
ಮುನ್ನರಿವಿಗೆ ಹೆಚ್ಚು ಮಹತ್ವವನ್ನು ನೀಡುವುದು ಹಿಪಕ್ರಟಿಕ್ ವೈದ್ಯಶಾಸ್ತ್ರದ ಶಕ್ತಿಗಳಲ್ಲಿ ಒಂದಾಗಿದೆ. ಹಿಪಾಕ್ರಟೀಸ್ನ ಕಾಲದಲ್ಲಿ, ವೈದ್ಯಕೀಯ ಚಿಕಿತ್ಸೆಯು ಅಪಕ್ವವಾಗಿತ್ತು. ಅಲ್ಲದೇ ರೋಗವನ್ನು ನಿರ್ಣಯಿಸುವುದು ಹಾಗು ವಿಸ್ತೃತ ಪೂರ್ವಚರಿತ್ರೆಗಳಿಂದ ಸಂಗ್ರಹಿಸಿದ ದತ್ತಾಂಶದ ಆಧಾರದ ಮೇಲೆ ಅದು ವಿಷಮ ಸ್ಥಿತಿಗೆ ತಲುಪದಂತೆ ತಡೆಯುವುದು ವೈದ್ಯರು ಮಾಡಬಹುದಾಗಿದ್ದ ಉತ್ತಮ ಕೆಲಸವಾಗಿತ್ತು.[೧೯][೩೧]
ಹಿಪಾಕ್ರಟಿಕ್ ವೈದ್ಯಶಾಸ್ತ್ರವು ಅದರ ಕಠಿಣವಾದ ವೃತ್ತಿಪರತೆ, ಶಿಸ್ತು ಹಾಗೂ ಕಠಿಣವಾದ ಅಭ್ಯಾಸಕ್ಕೆ ಹೆಸರಾಗಿದೆ.[೩೩] ಆನ್ ದ ಫ಼ಿಜ಼ೀಷಿಯನ್ ಎಂಬ ಹಿಪಾಕ್ರಟಿಕ್ ಕೃತಿಯು ವೈದ್ಯರು ಯಾವಾಗಲೂ ಸ್ವಚ್ಛವಾಗಿರಬೇಕು, ಪ್ರಾಮಾಣಿಕರಾಗಿರಬೇಕು, ಶಾಂತ ಸ್ವಭಾವದಿಂದಿರಬೇಕು, ಅರ್ಥಮಾಡಿಕೊಳ್ಳಬಲ್ಲವನಾಗಿರಬೇಕು ಹಾಗೂ ಗಂಭೀರವಾಗಿರಬೇಕು ಎಂದು ಶಿಫಾರಸು ಮಾಡುತ್ತದೆ. ಹಿಪಾಕ್ರಟಿಕ್ ವೈದ್ಯನು ವೃತ್ತಿಯ ಎಲ್ಲ ಅಂಶಗಳ ಮೇಲೆ ಎಚ್ಚರಿಕೆಯಿಂದ ಗಮನಹರಿಸುತ್ತಾನೆ. ಅವನು ಪ್ರಾಚೀನ ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ದೀಪ ವ್ಯವಸ್ಥೆ, ಸಿಬ್ಬಂದಿ, ಸಲಕರಣೆಗಳು, ರೋಗಿಯ ಸ್ಥಿತಿ ಹಾಗೂ ಬ್ಯಾಂಡೇಜ್ ಮಾಡುವ ಹಾಗೂ ಮುರಿದ ಮೂಳೆಗೆ ಪಟ್ಟಿಕಟ್ಟುವ ವಿಧಾನಗಳ ಬಗ್ಗೆ ಸಂಪೂರ್ಣ ವಿವರಣೆಗಳನ್ನು ಅನುಸರಿಸುತ್ತಾನೆ.[೩೪] ಅವನ ಬೆರಳಿನ ಉಗುರುಗಳನ್ನು ನಿಖರವಾದ ಉದ್ದದವರೆಗೆ ಮಾತ್ರ ಇಟ್ಟುಕೊಂಡಿರುತ್ತಾನೆ.[೩೫]
ಹಿಪಾಕ್ರಟಿಕ್ ಪಂಥವು ವೀಕ್ಷಣೆ ಮತ್ತು ದಾಖಲೆ ಸಂಗ್ರಣೆಯ ವೈದ್ಯಕೀಯ ಸಿದ್ಧಾಂತಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡಿತು. ಈ ಸಿದ್ಧಾಂತಗಳು, ವೈದ್ಯರು ತಮ್ಮ ಆವಿಷ್ಕಾರಗಳನ್ನು ಮತ್ತು ತಮ್ಮ ವೈದ್ಯಕೀಯ ವಿಧಾನಗಳನ್ನು ಸ್ಪಷ್ಟವಾಗಿ ಮತ್ತು ವಸ್ತುನಿಷ್ಠವಾಗಿ ದಾಖಲಿಸಿಡಬೇಕು ಎಂದು ತಿಳಿಸುತ್ತದೆ. ಇದರಿಂದಾಗಿ ಈ ದಾಖಲೆಗಳು ವರ್ಗಾವಣೆಯಾಗಿ ಇತರೆ ವೈದ್ಯರು ಇದನ್ನು ಬಳಸಬಹುದು.[೧೨] ಹಿಪಾಕ್ರಟೀಸ್, ಚರ್ಮದ ಬಣ್ಣ, ನಾಡಿ, ಜ್ವರ, ನೋವುಗಳು, ಚಲನೆ ಮತ್ತು ದೇಹಶುದ್ಧಿಯಂತಹ ಅನೇಕ ಲಕ್ಷಣಗಳ ಬಗ್ಗೆ ಎಚ್ಚರಿಕೆಯ, ನಿಯಮಿತವಾದ ಟಿಪ್ಪಣಿಯನ್ನು ಮಾಡುತ್ತಾನೆ.[೩೧] ಅವನು, ರೋಗದ ಪೂರ್ವಚರಿತ್ರೆಯನ್ನು ಪಡೆಯುವಾಗ ಒಂದು ವೇಳೆ ರೋಗಿ ಸುಳ್ಳುಹೇಳಿದರೆ, ರೋಗಿಯ ನಾಡಿಯ ಮಿಡಿತವನ್ನು ಅಳತೆಮಾಡುತ್ತಿದ್ದನೆಂದು ಹೇಳಲಾಗಿದೆ.[೩೬] ಹಿಪಾಕ್ರಟೀಸ್, ವೈದ್ಯಕೀಯ ವೀಕ್ಷಣೆಯನ್ನು ಕೌಟುಂಬಿಕ ಇತಿಹಾಸ ಮತ್ತು ಪರಿಸರದವರೆಗೆ ವಿಸ್ತರಿಸಿದನು.[೩೭] "ಅವನಿಗೆ ವೈದ್ಯಕೀಯ ಶಾಸ್ತ್ರವು ವೈದ್ಯಕೀಯ ತಪಾಸಣೆ ಮತ್ತು ವೀಕ್ಷಣೆಯ ಕಲೆಯಾಗಿತ್ತು".[೧೯] ಈ ಕಾರಣದಿಂದಾಗಿ, ಅವನನ್ನು ಹೆಚ್ಚು ಸೂಕ್ತವಾಗಿ " ರೋಗಿಯ ನೇರಪರೀಕ್ಷೆ (ಕ್ಲಿನಿಕಲ್) ಯ ವೈದ್ಯಶಾಸ್ತ್ರದ ದ ಪಿತಾಮಹ"ನೆಂದು ಕರೆಯಲಾಗಿದೆ.[೩೮]
ಹಿಪಾಕ್ರಟೀಸ್ ಮತ್ತು ಅವನ ಅನುಯಾಯಿಗಳು ಅನೇಕ ಕಾಯಿಲೆಗಳನ್ನು ಮತ್ತು ವೈದ್ಯಕೀಯ ಸ್ಥಿತಿಗತಿಗಳನ್ನು ಮೊದಲು ವಿವರಿಸಿದರು. ಅವನು, ಬೆರಳುಗಳು ರೂಪವಿಕೃತಿ ಬಗ್ಗೆ ಮೊದಲ ವಿವರಣೆ ನೀಡಿದ ಗೌರವವನ್ನು ಸಂಪಾದಿಸಿದ. ಇದು ಹುಣ್ಣಾಗುವ ದೀರ್ಘಕಾಲದ ಶ್ವಾಸಕೋಶ ಕಾಯಿಲೆಯನ್ನು, ಶ್ವಾಸಕೋಶದ ಕ್ಯಾನ್ಸರ್ ಮತ್ತು ನೀಲಿಮೆಯ ಹೃದಯರೋಗವನ್ನು ನಿರ್ಧರಿಸಲು ಸಹಾಯವಾಗುವ ಅತ್ಯಂತ ಪ್ರಮುಖ ರೋಗಲಕ್ಷಣವಾಗಿದೆ. ಈ ಕಾರಣದಿಂದಾಗಿ ರೂಪವಿಕೃತಿಗೊಂಡ ಬೆರಳುಗಳನ್ನು ಕೆಲವೊಮ್ಮೆ "ಹಿಪಾಕ್ರಟಿಕ್ ಬೆರಳುಗಳು" ಎಂದು ಉಲ್ಲೇಖಿಸಲಾಗುತ್ತದೆ.[೩೯] ಹಿಪಾಕ್ರಟೀಸ್, ಪ್ರಾಗ್ನಾಸಿಸ್ ನಲ್ಲಿ, ಹಿಪಾಕ್ರಟಿಕ್ ಮುಖವನ್ನು ವಿವರಿಸಿದ ಮೊದಲನೆಯ ವೈದ್ಯನಾಗಿದ್ದಾನೆ. ಶೇಕ್ಸ್ಪಿಯರ್, ಈ ವಿವರಣೆಯನ್ನು ಹೆನ್ರಿ V ದ ಅಂಕ II ರ ದೃಶ್ಯ iii ರಲ್ಲಿ ಫಾಲ್ಸ್ಟಫ್ನ ಸಾವಿನ ಬಗ್ಗೆ ಬರೆಯುವಾಗ ಪ್ರಾಸಂಗಿಕವಾಗಿ ಪ್ರಸ್ತಾಪಿಸಿದ್ದಾನೆ.[೪೦][೪೧]
ಹಿಪಾಕ್ರಟೀಸ್, ರೋಗಗಳನ್ನು ಉಲ್ಭಣಗೊಂಡ, ದೀರ್ಘಕಾಲದ, ಸ್ಥಳೀಯ ಮತ್ತು ಸಾಂಕ್ರಾಮಿಕ ರೋಗಗಳೆಂದು ವರ್ಗೀಕರಿಸಲು ಪ್ರಾರಂಭಿಸಿದ. ಅಲ್ಲದೇ "ಉಲ್ಭಣಗೊಂಡ, ಮರುಕಳಿಸುವ, ಶಮನ, ನಿರ್ಧಾರಕ ಸ್ಥಿತಿ, ರೋಗದ ಉಲ್ಭಣ, ಕೊನೆಯ ಘಟ್ಟ, ಮತ್ತು ಚೇತರಿಕೆಯಂತಹ ಪದಗಳನ್ನು ಬಳಸಿದ."[೩೧][೪೨] ಹಿಪಾಕ್ರಟೀಸ್ನ ಮತ್ತೊಂದು ಪ್ರಮುಖ ಕೊಡುಗೆಯು, ಅವನ ರೋಗಲಕ್ಷಣಶಾಸ್ತ್ರ, ದೈಹಿಕ ಆವಿಷ್ಕಾರಗಳು, ಶಸ್ತ್ರಚಿಕಿತ್ಸೆ ಮತ್ತು ಎದೆಗೂಡಿನಲ್ಲಿ ಕೀವು ಶೇಖರಣೆಯ ಮುನ್ನರಿವಿನ ವಿವರಣೆಗಳಲ್ಲಿ ಕಂಡುಬರುತ್ತದೆ, ಉದಾಹರಣೆಗೆ, ಎದೆಯ ಕವಾಟದ ಒಳಪದರದಲ್ಲಿ ಕೀವಾಗುವುದು. ಅವನ ಬೋಧನೆಗಳು ಶ್ವಾಸಕೋಶದ ವೈದ್ಯಶಾಸ್ತ್ರ ಮತ್ತು ಶಸ್ತ್ರಚಿಕಿತ್ಸೆಯ ಇಂದಿನ ದಿನದ ವಿದ್ಯಾರ್ಥಿಗಳಿಗೆ ಪ್ರಸ್ತುತವಾಗಿದೆ.[೪೩] ಹಿಪಾಕ್ರಟೀಸ್, ದಾಖಲಿಸಲಾದ ಮೊಟ್ಟ ಮೊದಲನೆಯ ಎದೆಯ ಶಸ್ತ್ರಚಿಕಿತ್ಸಕನಾಗಿದ್ದಾನೆ. ಅಲ್ಲದೇ ಅವನ ಆವಿಷ್ಕಾರಗಳು ಇನ್ನೂ ಕ್ರಮಬದ್ಧವಾಗಿವೆ.[೪೩]
ವೈದ್ಯಶಾಸ್ತ್ರದ ಹಿಪಾಕ್ರಟಿಕ್ ಪಂಥವು, ಅದರ ವೈದ್ಯಶಾಸ್ತ್ರದ ದುರ್ಬಲ ಸಿದ್ಧಾಂತದ ಹೊರತಾಗಿಯೂ, ಮಾನವನ ಗುದನಾಳದ ವ್ಯಾಧಿಗಳನ್ನು ಹಾಗೂ ಅದರ ಚಿಕಿತ್ಸೆಗಳನ್ನು ಚೆನ್ನಾಗಿ ವಿವರಿಸಿದೆ. ಮೂಲವ್ಯಾಧಿ, ಉದಾಹರಣೆಗೆ, ಇದು ಪಿತ್ತರಸ ಮತ್ತು ಶ್ಲೇಷ್ಮ ಹೆಚ್ಚಾಗುವುದರಿಂದ ಉಂಟಾಗುತ್ತದೆ ಎಂದು ನಂಬಿದ್ದರೂ, ಇದಕ್ಕೆ ಹಿಪಾಕ್ರಟಿಕ್ ವೈದ್ಯರು ತುಲನಾತ್ಮಕವಾಗಿ ಅತ್ಯಂತ ಮುಂದುವರೆದ ರೀತಿಯಲ್ಲಿ ಚಿಕಿತ್ಸೆ ನೀಡಿದ್ದಾರೆ.[೪೪][೪೫] ಸುಡಣೆ (ಕಬ್ಬಿಣದ ಬರೆಕಡ್ಡಿ) ಮತ್ತು ಛೇದನಗಳನ್ನು ಆದ್ಯ ವಿಧಾನಗಳ ಜೊತೆಯಲ್ಲಿ ಹಿಪಾಕ್ರಟಿಕ್ ಗ್ರಂಥ ಸಂಗ್ರಹದಲ್ಲಿ ವಿವರಿಸಲಾಗಿದೆ: ಮೂಲವ್ಯಾಧಿಯನ್ನು ಬಿಗಿಯುವುದು ಹಾಗೂ ಬಿಸಿ ಕಬ್ಬಿಣದ ಮೂಲಕ ಒಣಗಿಸುವುದು. ವಿವಿಧ ಮುಲಾಮುಗಳನ್ನು ಹಚ್ಚುವಂತಹ ಇತರ ಚಿಕಿತ್ಸೆಗಳನ್ನು ಸೂಚಿಸಲಾಗಿದೆ.[೪೬][೪೭] ಇಂದು, "ಚಿಕಿತ್ಸೆಯು ಸುಡುವುದು, ಬಿಗಿಯುವುದು, ಮತ್ತು ಕತ್ತರಿಸಿಹಾಕುವುದನ್ನು" ಇನ್ನೂ ಒಳಗೊಂಡಿವೆ.[೪೪] ಅಲ್ಲದೇ ಗ್ರಂಥ ಸಂಗ್ರಹದಲ್ಲಿ ವಿವರಿಸಲಾದ ಪ್ರಾಕ್ಟಸ್ಕೋಪಿಯ ದ ಕೆಲವೊಂದು ಮೂಲಭೂತ ಪರಿಕಲ್ಪನೆಗಳು ಇನ್ನೂ ಬಳಕೆಯಲ್ಲಿವೆ,[೪೪][೪೫] ಉದಾಹರಣೆಗೆ, ಗುದನಾಳ ಕುಹರವರ್ಧಕದ (ಸ್ಪೆಕ್ಯುಲಮ್) ಬಳಕೆ. ಇದು ಸಾಮಾನ್ಯವಾದ ವೈದ್ಯಕೀಯ ಸಾಧನವಾಗಿದ್ದು, ಇದನ್ನು ಹಿಪಾಕ್ರಟಿಕ್ ಗ್ರಂಥ ಸಂಗ್ರಹದಲ್ಲಿ ಚರ್ಚಿಸಲಾಗಿದೆ.[೪೫] ಇದು ಅಂತರ್ದರ್ಶಕಕ್ಕೆ ಹಿಂದೆ ದಾಖಲಿತವಾಗಿದ್ದ ಉದಾಹರಣೆಯನ್ನು ನೀಡುತ್ತದೆ.[೪೮][೪೯]
ಹಿಪಾಕ್ರಟಿಕ್ ಗ್ರಂಥ ಸಂಗ್ರಹ (ಲ್ಯಾಟಿನ್: ಕಾರ್ಪಸ್ ಹಿಪೊಕ್ರೆಟಿಕಮ್) ಎಂಬುದು ಪ್ರಾಚೀನ ಗ್ರೀಸ್ನಿಂದ ತೆಗೆದುಕೊಂಡ ಅಯಾನಿಕ್ ಗ್ರೀಕ್ ಭಾಷೆಯಲ್ಲಿ ಬರೆಯಲಾದ ಹಿಂದಿನ ಸುಮಾರು ಎಪ್ಪತ್ತು ವೈದ್ಯಕೀಯ ಲೇಖನಗಳ ಸಂಗ್ರಹವಾಗಿದೆ. ಹಿಪಾಕ್ರಟೀಸನೇ ಗ್ರಂಥ ಸಂಗ್ರಹದ ಕರ್ತೃ ಎಂಬ ಪ್ರಶ್ನೆಗೆ ಸಮಗ್ರ ಉತ್ತರವನ್ನು ನೀಡಲಾಗಿಲ್ಲ,[೫೦] ಆದರೆ ಸಂಪುಟವನ್ನು ಬಹುಶಃ ಅವನ ವಿದ್ಯಾರ್ಥಿಗಳು ಮತ್ತು ಅನುಯಾಯಿಗಳು ತಯಾರಿಸಿದ್ದಾರೆ.[೫೧] ವಸ್ತುವಿನ ವಿಭಿನ್ನತೆಯಿಂದಾಗಿ, ಬರವಣಿಗೆಯ ಶೈಲಿಗಳಿಂದಾಗಿ ಹಾಗೂ ರಚನೆಯ ಸ್ಪಷ್ಟ ದಿನಾಂಕದಿಂದಾಗಿ, ವಿದ್ವಾಂಸರು ಹಿಪಾಕ್ರಟಿಕ್ ಗ್ರಂಥ ಸಂಗ್ರಹ ಕೇವಲ ಒಬ್ಬ ವ್ಯಕ್ತಿಯಿಂದ ರಚಿತವಾಗಿಲ್ಲ ಎಂದು ನಂಬಿದ್ದಾರೆ (ಎರ್ಮೆರಿನ್ಸ್ ಹತ್ತೊಂಭತ್ತು ಜನ ಲೇಖಕರು ಎಂದು ಸೂಚಿಸುತ್ತಾನೆ).[೩೦] ಗ್ರಂಥ ಸಂಗ್ರಹಕ್ಕೆ ಪ್ರಾಚೀನತೆಯಲ್ಲಿ ಹಿಪಾಕ್ರಟೀಸ್ನನ್ನು ಹೊಣೆ ಮಾಡಲಾಗಿದೆ. ಅಲ್ಲದೇ ಇದರ ಬೋಧನೆಗಳು ಅವನ ತತ್ವಗಳನ್ನು ಅನುಸರಿಸುತ್ತವೆ; ಆದ್ದರಿಂದ ಇದು ಇವನ ಹೆಸರಿನಲ್ಲಿಯೇ ಪ್ರಸಿದ್ಧವಾಯಿತು. ಇದು ಕಾಸ್ನ ಗ್ರಂಥಾಲಯದ ಅವಶೇಷವಾಗಿದೆ, ಅಥವಾ ಅಲೆಗ್ಸಾಂಡ್ರಿಯದಲ್ಲಿ ಕ್ರಿಸ್ತಪೂರ್ವ ೩ನೇ ಶತಮಾನದಲ್ಲಿ ಒಟ್ಟುಮಾಡಿದ ಸಂಗ್ರಹವಾಗಿದೆ.[೧೩][೩೪]
ಹಿಪಾಕ್ರಟಿಕ್ ಗ್ರಂಥ ಸಂಗ್ರಹವು ಪಠ್ಯಪುಸ್ತಕಗಳನ್ನು, ಉಪನ್ಯಾಸಗಳನ್ನು, ಸಂಶೋಧನೆ, ಟಿಪ್ಪಣಿ ಮತ್ತು ಯಾವುದೇ ನಿರ್ದಿಷ್ಟ ಕ್ರಮದಲ್ಲಿರದ ವೈದ್ಯಶಾಸ್ತ್ರದ ಮೇಲೆ ಬರೆಯಲಾದ ತತ್ತ್ವಶಾಸ್ತ್ರದ ವಿಭಿನ್ನ ಪ್ರಬಂಧಗಳನ್ನು ಒಳಗೊಂಡಿದೆ.[೫೦][೫೨] ಈ ಲೇಖನಗಳನ್ನು ವಿಭಿನ್ನ ಶ್ರೋತೃಗಳಿಗಾಗಿ, ವಿಶೇಷತಜ್ಞರಿಗೆ ಮತ್ತು ವೃತ್ತಿಪರರಲ್ಲದವರಿಗೂ ಬರೆಯಲಾಗಿದೆ. ಅಲ್ಲದೇ ಅವುಗಳನ್ನು ಕೆಲವೊಮ್ಮೆ ವಿರುದ್ಧ ದೃಷ್ಟಿಕೋನದಿಂದಲೂ ಬರೆಯಲಾಗಿದೆ; ಗ್ರಂಥ ಸಂಗ್ರಹದ ಲೇಖನಗಳ ನಡುವೆ ಗಮನಾರ್ಹ ವೈರುದ್ಧ್ಯಗಳನ್ನು ನೋಡಬಹುದು.[೫೩] ಗ್ರಂಥ ಸಂಗ್ರಹದ ಪ್ರಬಂಧಗಳಲ್ಲಿ ಪ್ರಮುಖವಾದ ಪ್ರಬಂಧಗಳು ಕೆಳಕಂಡಂತಿವೆ: ದ ಹಿಪಾಕ್ರಟಿಕ್ ಓತ್; ದ ಬುಕ್ ಆಫ್ ಪ್ರೊಗ್ನಾಸ್ಟಿಕ್ಸ್; ಆನ್ ರೆಜಿಮೆನ್ ಇನ್ ಅಕ್ಯುಟ್ ಡಿಸೀಸಸ್; ಆಫರಿಸಮ್ಸ್; ಆನ್ ಏರ್ಸ, ವಾಟರ್ಸ್ ಅಂಡ್ ಪ್ಲೇಸ್ಸ್; ಇನ್ಸ್ಟ್ರುಮೆಂಟ್ಸ್ ಆಫ್ ರಿಡಕ್ಷನ್; ಆನ್ ದ ಸೇಕ್ರಿಡ್ ಡಿಸೀಸ್; ಇತ್ಯಾದಿ.[೩೦]
ಹಿಪಾಕ್ರಟಿಕ್ ಓಥ್ ಎಂಬುದು, ವೈದ್ಯಕೀಯ ವೃತ್ತಿಯ ನೀತಿನಿಯಮಗಳ ಮೇಲೆ ಬರೆಯಲಾದ ಮೂಲ ದಾಖಲೆಯಾಗಿದೆ. ಇದು ಪ್ರಾಚೀನತೆಯಲ್ಲಿ ಹಿಪಾಕ್ರಟೀಸ್ ಬರೆದಿದ್ದೆಂದು ಹೇಳಲಾಗಿದ್ದರೂ, ಹೊಸ ಮಾಹಿತಿಯು ಇದನ್ನು ಅವನ ಮರಣದ ನಂತರ ಬರೆಯಲಾಗಿದೆ ಎಂಬುದನ್ನು ತೋರಿಸುತ್ತದೆ. ಇದು ಬಹುಶಃ ಹಿಪಾಕ್ರಟಿಕ್ ಗ್ರಂಥ ಸಂಗ್ರಹದ ಅತ್ಯಂತ ಜನಪ್ರಿಯ ದಾಖಲೆಯಾಗಿದೆ. ಇತ್ತೀಚೆಗೆ ಈ ದಾಖಲೆಯ ಲೇಖಕನ ಸತ್ಯಾಸತ್ಯತೆಯು ಸೂಕ್ಷ್ಮ ಪರಿಶೀಲನೆಗೆ ಒಳಪಟ್ಟಿದೆ. ಈ ಪ್ರಮಾಣವನ್ನು ಅದರ ಮೂಲ ರೂಪದಲ್ಲಿ ಇಂದು ವಿರಳವಾಗಿ ಬಳಸುತ್ತಿದ್ದರೂ, ಇದು ಉತ್ತಮ ವೈದ್ಯಕೀಯ ವೃತ್ತಿಯನ್ನು ಮತ್ತು ನೈತಿಕತೆಯನ್ನು ವ್ಯಾಖ್ಯಾನಿಸುವ ಇತರೆ ಹೋಲಿಕೆಯ ಪ್ರಮಾಣಗಳಿಗೆ ಮತ್ತು ಕಾನೂನುಗಳಿಗೆ ಬುನಾದಿಯಾಗಿ ಕೆಲಸ ಮಾಡುತ್ತದೆ. ಇಂತಹ ಜನ್ಯಪದಗಳನ್ನು ಇಂದು ವೈದ್ಯಕೀಯ ಪದವೀಧರರು ವೈದ್ಯಕೀಯ ವೃತ್ತಿಯನ್ನು ಪ್ರವೇಶಿಸುವಾಗ ಕ್ರಮಬದ್ಧವಾಗಿ ತೆಗೆದುಕೊಳ್ಳುತ್ತಾರೆ.[೧೩][೫೪][೫೫]
ಹಿಪಾಕ್ರಟೀಸ್ನನ್ನು "ವೈದ್ಯಶಾಸ್ತ್ರದ ಪಿತಾಮಹ" ನೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.[೫೧] ಅವನ ಕೊಡುಗೆಗಳು ವೈದ್ಯಶಾಸ್ತ್ರದ ವೃತ್ತಿಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು; ಆದರೆ ಅವನ ಮರಣದ ನಂತರ ಮುನ್ನಡೆಯು ಸ್ಥಗಿತಗೊಂಡಿತು.[೫೬] ಹಿಪಾಕ್ರಟೀಸ್ ಎಷ್ಟೊಂದು ಗೌರವಕ್ಕೆ ಪಾತ್ರನಾಗಿದ್ದಾನೆಂದರೆ, ಅವನ ಬೋಧನೆಗಳನ್ನು ಅತ್ಯಂತ ಮಹತ್ತರವಾಗಿ ಪರಿಗಣಿಸಲಾಯಿತು. ಅಲ್ಲದೇ ದೀರ್ಘಕಾಲದವರೆಗೂ ಅವನ ವಿಧಾನಗಳ ಬಗ್ಗೆ ಯಾವುದೇ ಗಮನಾರ್ಹ ಮುನ್ನಡೆಗಳು ಕಂಡುಬರಲಿಲ್ಲ.[೧೩][೨೭] ಹಿಪಾಕ್ರಟೀಸ್ನ ಮರಣದ ನಂತರದ ಶತಮಾನಗಳಲ್ಲಿ ಮತ್ತಷ್ಟು ಮುನ್ನಡೆಯ ಬದಲಿಗೆ ವಿರುದ್ಧಗತಿಯ ಚಲನೆಯಿತ್ತು. ಉದಾಹರಣೆಗೆ, ಫಿಲ್ಡಿಂಗ್ ಗ್ಯಾರಿಸನ್ನ ಪ್ರಕಾರ "ಹಿಪಾಕ್ರಟಿಕ್ ಕಾಲದ ನಂತರ, ಪ್ರಾಯೋಗಿಕ ಪೂರ್ವ ಚರಿತ್ರೆಗಳ ಮಾಹಿತಿಯನ್ನು ತೆಗೆದುಕೊಳ್ಳುವ ಅಭ್ಯಾಸವು ನಿಂತುಹೋಯಿತು...".[೫೭]
ಹಿಪಾಕ್ರಟೀಸ್ ನಂತರ ಬಂದ ಪ್ರಮುಖ ವೈದ್ಯನೆಂದರೆ ಗ್ಯಾಲೆನ್. ಇವನು ಗ್ರೀಸ್ನವನಾಗಿದ್ದು ಕ್ರಿ.ಶ. ೧೨೯ ರಿಂದ ೨೦೦ ರವರೆಗೆ ಬದುಕಿದ್ದನು. ಗ್ಯಾಲೆನ್ ಮುನ್ನಡೆ ಮತ್ತು ಹಿನ್ನಡೆಯ ಮೂಲಕ ಹಿಪಾಕ್ರಟಿಕ್ ವೈದ್ಯಶಾಸ್ತ್ರವನ್ನು ಅವಿಸ್ಮರಣೀಯವಾಗಿಸಿದನು.[೫೮] ಮಧ್ಯ ಯುಗದಲ್ಲಿ, ಅರಬ್ ಜನರು ಹಿಪಾಕ್ರಟಿಕ್ ವಿಧಾನಗಳನ್ನು ಅಳವಡಿಸಿಕೊಂಡರು.[೫೯] ಯುರೋಪಿಯನ್ ಪುನರುದಯದ ನಂತರ, ಹಿಪಾಕ್ರಟಿಕ್ ವಿಧಾನಗಳು ಯುರೋಪ್ನಲ್ಲಿ ಮತ್ತೆ ಪುನಶ್ಚೇತನ ಪಡೆದವು ಹಾಗೂ ಇದು ೧೯ನೇ ಶತಮಾನದಲ್ಲಿ ಮತ್ತಷ್ಟು ವಿಸ್ತರಣೆಗೊಂಡಿತು. ಸಿಡೆನ್ಹ್ಯಾಮ್, ಹರ್ಬರ್ಡನ್, ಚಾರ್ಕಾಟ್ ಮತ್ತು ಒಸ್ಲರ್ ಎಂಬುವವರು ಹಿಪಾಕ್ರಟೀಸ್ನ ಕಠಿಣವಾದ ಪ್ರಾಯೋಗಿಕ ವಿಧಾನಗಳನ್ನು ಬಳಸಿಕೊಂಡರು. ಫ್ರೆಂಚ್ ವೈದ್ಯನಾದ ಹೆನ್ರಿ ಹಚರ್ಡ್, ಈ ಪುನಶ್ಚೇತನಗಳು "ಆಂತರಿಕ ವೈದ್ಯಶಾಸ್ತ್ರದ ಸಂಪೂರ್ಣ ಇತಿಹಾಸವನ್ನು" ನಿರ್ಮಿಸುತ್ತದೆ ಎಂದು ಹೇಳಿದ್ದಾನೆ.[೬೦]
ಅರಿಸ್ಟಾಟಲ್ನ ಹೇಳಿಯ ಪ್ರಕಾರ, ಹಿಪಾಕ್ರಟೀಸ್ "ದ ಗ್ರೇಟ್ ಹಿಪಾಕ್ರಟೀಸ್" ಎಂದು ಹೆಸರಾಗಿದ್ದನು.[೬೧] ಅವನ ಸ್ವಭಾವಕ್ಕೆ ಸಂಬಂಧಿಸಿದಂತೆ, ಹಿಪಾಕ್ರಟೀಸ್ನನ್ನು ಮೊಟ್ಟ ಮೊದಲನೆಯ ಬಾರಿಗೆ "ಕರುಣಾಳುವಿನಂತೆ, ಸಂಭಾವಿತ, ಹಿರಿಯ ನಾಡ ವೈದ್ಯ" ನಂತೆ ಚಿತ್ರಿಸಲಾಗಿತ್ತು. ನಂತರ "ಕಟ್ಟುನಿಟ್ಟಿನ ಮತ್ತು ಅಪಕರ್ಷಕನಂತೆ" ಚಿತ್ರಿಸಲಾಯಿತು.[೧೩] ಅವನನ್ನು ನಿರ್ದಿಷ್ಟವಾಗಿ ಅತ್ಯಂತ ಬುದ್ಧಿವಂತಿಕೆಯ ಸೂಕ್ಷ್ಮ ಗ್ರಹಿಕೆಯ ವ್ಯಕ್ತಿ ಹಾಗೂ ವಿಶೇಷವಾಗಿ ಅತ್ಯಂತ ಪ್ರಯೋಗಶೀಲ ವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ. ಫ್ರಾನ್ಸಿಸ್ ಆಡಮ್ಸ್, ಅವನನ್ನು "ಸಂಪೂರ್ಣವಾಗಿ, ಅನುಭವದ ಮತ್ತು ಸಾಮಾನ್ಯ ತಿಳುವಳಿಕೆಯ ವೈದ್ಯ" ಎಂದು ವಿವರಿಸಿದ್ದಾನೆ.[೨೦]
ಬುದ್ಧಿವಂತ ಹಿರಿಯ ವೈದ್ಯನಂತಿರುವ ಅವನ ಚಿತ್ರವು ಅವನ ಪ್ರತಿಮೆಗಳಿಂದ ಬಲಪಟ್ಟಿದೆ. ಈ ಪ್ರತಿಮೆಯು ಸುಕ್ಕಾದ ಮುಖದ ಮೇಲೆ ದೊಡ್ಡ ಗಡ್ಡವನ್ನು ಹೊಂದಿದೆ. ಆ ಕಾಲದ ಅನೇಕ ವೈದ್ಯರು ತಮ್ಮ ಕೂದಲನ್ನು ಜುಪಿಟರ್ ಅಥವಾ ಆಸ್ಕ್ಲೆಪಿಸ್ನಂತೆ ಬಿಡುತ್ತಿದ್ದರು. ಇದೇ ಪ್ರಕಾರ, ನಾವು ಹೊಂದಿರುವ ಹಿಪಾಕ್ರಟೀಸ್ನ ಪ್ರತಿಮೆಗಳು ಈ ದೇವತೆಗಳ ಚಿತ್ರಗಳ ಮಾರ್ಪಡಿಸಲಾದ ಆವೃತ್ತಿಗಳಾಗಿವೆ.[೫೬] ಹಿಪಾಕ್ರಟೀಸ್ ಮತ್ತು ಅವನು ವ್ಯಕ್ತಪಡಿಸಿದ ನಂಬಿಕೆಗಳನ್ನು ವೈದ್ಯಕೀಯ ಕ್ಷೇತ್ರದ ಆದರ್ಶಗಳೆಂದು ಪರಿಗಣಿಸಲಾಗುತ್ತದೆ. ವೈದ್ಯಕೀಯ ಇತಿಹಾಸದಲ್ಲಿ ತಜ್ಞನಾಗಿದ್ದ ಫೀಲ್ಡಿಂಗ್ ಗ್ಯಾರಿಸನ್, "ಎಲ್ಲಕ್ಕಿಂತ ಮಿಗಿಲಾದ ಅವನು, ಮನಸ್ಸಿನ, ಹೊಂದಿಕೊಳ್ಳುವ, ವಿಮರ್ಶಾತ್ಮಕ, ಸರಿತೂಗಿಸುವ ವರ್ತನೆಯ ಮಾದರಿಯಾಗಿದ್ದಾನೆ. ಯಾವಾಗಲು ತಪ್ಪಿನ ಮೂಲಗಳಿಗಾಗಿ ಹುಡುಕುತ್ತಿದ್ದ. ಇದು ವೈಜ್ಞಾನಿಕ ಆಸಕ್ತಿಗೆ ಬೇಕಾದ ಅತಿ ಮುಖ್ಯ ಅಂಶವಾಗಿದೆ" ಎಂದು ತಿಳಿಸಿದ್ದಾನೆ.[೬೦] ಎ ಶಾರ್ಟ್ ಹಿಸ್ಟ್ರಿ ಆಫ್ ಮೆಡಿಸಿನ್ ನ ಪ್ರಕಾರ ಅವನ ವ್ಯಕ್ತಿತ್ವವು ಆದರ್ಶ ವೈದ್ಯನಾಗಿ ಸಾರ್ವಕಾಲಿಕವಾಗಿ ಉಳಿಯುತ್ತದೆ. ಅವನ ಸಾವಿನ ನಂತರ ವೈದ್ಯಕೀಯ ವೃತ್ತಿಗೆ ಅವನು ಸ್ಫೂರ್ತಿಯಾಗಿದ್ದಾನೆ.[೬೨]
Aphorisms i.1.
ಹಿಪಾಕ್ರಟೀಸ್ನ ಜೀವನದ ಬಗೆಗಿರುವ ಬಹುಪಾಲು ಕಥೆಗಳು ಸುಳ್ಳುಕಥೆಗಳಾಗಿ ಕಾಣುತ್ತವೆ. ಏಕೆಂದರೆ ಅವುಗಳು ಐತಿಹಾಸಿಕ ಸಾಕ್ಷಿಗಳೊಂದಿಗೆ ಹೊಂದಿಕೆಯಾಗುವುದಿಲ್ಲ. ಅಲ್ಲದೇ ಅವಿಸೆನ್ನಾ ಮತ್ತು ಸಾಕ್ರಿಟಿಸ್ನಂತಹ ಇತರ ವ್ಯಕ್ತಿಗಳ ಬಗ್ಗೆ ಐತಿಹ್ಯಗಳ ಮೂಲವನ್ನು ಸೂಚಿಸುತ್ತ, ಇದೇ ರೀತಿಯ ಅಥವಾ ಹೋಲಿಕೆಯ ಕಥೆಗಳನ್ನು ಹೇಳಲಾಗಿದೆ. ಅಲ್ಲದೇ ಅವನು ಬದುಕಿದ್ದ ಕಾಲದಲ್ಲಿಯೂ ಹಿಪಾಕ್ರಟೀಸ್ನ ಪ್ರಖ್ಯಾತಿಯು ಮಹತ್ತರವಾಗಿತ್ತು ಮತ್ತು ಪವಾಡಸದೃಶ ರೋಗಚಿಕಿತ್ಸೆಯ ಕಥೆಗಳು ಹುಟ್ಟಿಕೊಂಡವು. ಉದಾಹರಣೆಗೆ, ಹಿಪಾಕ್ರಟೀಸ್, ಅಥೆನ್ಸ್ನಲ್ಲಿ ಪ್ಲೇಗ್ ಹರಡಿದ್ದ ಸಂದರ್ಭದಲ್ಲಿ ಅಥೇನಿಯನ್ನರನ್ನು "ಸೋಂಕು ನಿವಾರಕ" ವೆಂಬಂತೆ ಬೆಂಕಿಗಳನ್ನು ಉರಿಸುವ ಮೂಲಕ ಮತ್ತು ಇತರ ಚಿಕಿತ್ಸೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುಣಪಡಿಸಿದನು. ಹಿಪಾಕ್ರಟೀಸ್, ಪರ್ಡಿಕಸ್ ಎಂಬ ಮ್ಯಾಸಿಡೋನಿಯನ್ ರಾಜನ, "ಪ್ರೇಮ ರೋಗ"ವನ್ನು ಗುಣಪಡಿಸಿದ ಎಂಬ ಕಥೆಯಿದೆ. ಈ ಮಾಹಿತಿಗಳನ್ನು ಯಾವ ಇತಿಹಾಸಕಾರರೂ ದೃಢೀಕರಿಸಿಲ್ಲ. ಆದ್ದರಿಂದ ಇವು ನಡೆದಿರಲು ಸಾಧ್ಯವಿಲ್ಲ.[೬೩][೬೪][೬೫]
ಇವನ ಬಗ್ಗೆ ಇರುವ ಮತ್ತೊಂದು ಐತಿಹ್ಯವು, ಹಿಪಾಕ್ರಟೀಸ್ ಹೇಗೆ ಆರ್ಟಾಕ್ಸರಕ್ಸಸ್ ನ್ಯಾಯಾಲಯವನ್ನು ಒಮ್ಮೆ ಭೇಟಿಮಾಡಬೇಕೆಂಬ, ಪರ್ಶಿಯಾದ ರಾಜನ ಔಪಚಾರಿಕ ಮನವಿಯನ್ನು ತಳ್ಳಿಹಾಕಿದ ಎಂಬುದಕ್ಕೆ ಸಂಬಂಧಿಸಿದೆ.[೬೭] ಇದರ ತರ್ಕಬದ್ಧತೆಯನ್ನು ಪ್ರಾಚೀನ ಮೂಲಗಳು ಒಪ್ಪಿಕೊಂಡಿವೆ. ಆದರೆ ಕೆಲವು ಆಧುನಿಕ ಮೂಲಗಳು ನಿರಾಕರಿಸಿವೆ. ಆದ್ದರಿಂದ, ಇದು ವಿವಾದಾತ್ಮಕವಾಗಿ ಉಳಿದಿದೆ.[೬೮] ಮತ್ತೊಂದು ಕಥೆ, ಡೆಮೊಕ್ರಿಟಸ್ ಹುಚ್ಚನಾಗಿದ್ದಿರಬೇಕು, ಏಕೆಂದರೆ ಅವನು ಎಲ್ಲಾ ವಿಷಯಕ್ಕೂ ನಗುತ್ತಿದ್ದ. ಆದ್ದರಿಂದ ಅವನನ್ನು ಗುಣಪಡಿಸಲು ಹಿಪಾಕ್ರಟೀಸ್ನಲ್ಲಿಗೆ ಕಳುಹಿಸಲಾಯಿತು ಎಂದು ಹೇಳುತ್ತದೆ. ಅವನು ಕೇವಲ ಸಂತೋಷದ ಮನಸ್ಥಿತಿಯನ್ನು ಹೊಂದಿದ್ದಾನೆಂಬುದನ್ನು ಹಿಪಾಕ್ರಟೀಸ್ ಗುರುತಿಸಿದನು. ಡೆಮೊಕ್ರಿಟಸ್ನನ್ನು ಆಗಿನಿಂದ "ನಗುತ್ತಿರುವ ತತ್ತ್ವಜ್ಞಾನಿ" ಎಂದೇ ಕರೆಯಲಾಯಿತು.[೬೯]
ಹಿಪಾಕ್ರಟೀಸ್ನ ಎಲ್ಲಾ ಕಥೆಗಳು ಅವನನ್ನು ಸಕಾರಾತ್ಮಕ ರೀತಿಯಲ್ಲಿ ಚಿತ್ರಿಸಿಲ್ಲ. ಒಂದು ಐತಿಹ್ಯದಲ್ಲಿ ಹಿಪಾಕ್ರಟೀಸ್, ಗ್ರೀಸ್ನಲ್ಲಿರುವ ಕಾಯಿಲೆ ಉಪಶಮನದ ದೇವಸ್ಥಾನಕ್ಕೆ ಬೆಂಕಿಯನ್ನು ಹಚ್ಚಿದ ನಂತರ ಅಲ್ಲಿಂದ ಓಡಿಹೋದನೆಂದು ಹೇಳಲಾಗಿದೆ. ಎಫೆಸಸ್ನ ಸೊರಾನಸ್ ಎಂಬ ವೈದ್ಯ, ಈ ಕಥೆಯ ಮೂಲಕರ್ತ, ನಿಡೋಸ್ನ ದೇವಸ್ಥಾನದ ಹೆಸರನ್ನು ನೀಡುತ್ತಾನೆ. ಆದರೂ ಶತಮಾನಗಳ ನಂತರ, ಬೈಜ಼ನ್ಟೈನ್ ಗ್ರೀಕ್ ವ್ಯಾಕರಣಕಾರನಾದ ಜಾನ್ ಜೆಟ್ಜೆಸ್, ಹಿಪಾಕ್ರಟೀಸ್ ತನ್ನ ಸ್ವಂತ ದೇವಸ್ಥಾನವಾದ ಕಾಸ್ನ ದೇವಸ್ಥಾನವನ್ನು ಸುಟ್ಟುಹಾಕಿದ. ಏಕೆಂದರೆ ವೈದ್ಯಕೀಯ ಜ್ಞಾನದ ಏಕಸ್ವಾಮ್ಯವನ್ನು ಕಾಯ್ದುಕೊಳ್ಳಲು ಹೀಗೆ ಮಾಡಿದ ಎಂದು ಊಹಿಸಿದ. ಈ ಮಾಹಿತಿಯು ಹಿಪಾಕ್ರಟೀಸ್ನ ವ್ಯಕ್ತಿತ್ವದ ಸಾಂಪ್ರದಾಯಿಕ ಮಾಹಿತಿಗಳಿಗೆ ವಿರುದ್ಧವಾಗಿದೆ. ಇತರ ಐತಿಹ್ಯಗಳು ಅಗಸ್ಟಸ್ನ ಸೋದರನ ಮಗನಿಂದ ಅವನ ಪುನರುತ್ಥಾನದ ಬಗ್ಗೆ ತಿಳಿಸುತ್ತವೆ; ಅವನ ಸಾಧನೆಯನ್ನು ಹಿಪಾಕ್ರಟೀಸ್ನ ಪ್ರತಿಮೆಯ ನಿರ್ಮಾಣದಿಂದ ಹಾಗೂ ಅವನ ಗೌರವಾರ್ಥ ರೋಮ್ ನಲ್ಲಿ ಪ್ರಾಧ್ಯಾಪಕತ್ವವನ್ನು ಸ್ಥಾಪಿಸುವ ಮೂಲಕ ಮಾಡಲಾಯಿತು.[೧೨][೬೩][೬೫][೭೦]
ಹಿಪಾಕ್ರಟೀಸ್ನ ಪ್ರಸಿದ್ಧ ವಂಶಾನ್ವೇಷಣವು ಅವನ ತಂದೆಯ ವಂಶಜರು ಆಸ್ಕ್ಲೆಪಿಸ್ ಮತ್ತು ತಾಯಿಯ ಪೂರ್ವಿಕರು ಹರಾಕಲ್ಸ್ ಎಂಬುದನ್ನು ನೇರವಾಗಿ ಪತ್ತೆಮಾಡಿದೆ.[೩೦] ಟ್ಜೆಟ್ಜೆಸ್ನ ಚಿಲೈಡ್ಸ್ ನ ಪ್ರಕಾರ , ಹಿಪಾಕ್ರಟೀಸ್ನ ಆನೆನ್ತಫೆಲ್ II:[೭೧]
೧. ಹಿಪಾಕ್ರಟೀಸ್ II. “ವೈದ್ಯಶಾಸ್ತ್ರದ ಪಿತಾಮಹ”
೨. ಹರ್ಕ್ಲೈಡ್ಸ್
೪. ಹಿಪಾಕ್ರಟೀಸ್ I.
೮. ಗ್ನೊಸಿಡಿಕಸ್
೧೬. ನೆಬ್ರುಸ್
೩೨. ಸೊಸ್ಟ್ರ್ಯಾಟಸ್ III.
೬೪. ಥಿಯೋಡೋರಸ್ II.
೧೨೮. ಸೊಸ್ಟ್ರ್ಯಾಟಸ್, II.
೨೫೬. ಥಿಡೊರಸ್
೫೧೨. ಕ್ಲಿಯೊಮೈಟ್ಯಾಡ್ಸ್
೧೦೨೪. ಕ್ರಿಸಮಿಸ್
೨೦೪೮. ಡಾರ್ಡಾನಸ್
೪೦೯೬. ಸೊಸ್ಟ್ಯಾಟಸ್
೮೧೯೨. ಹಿಪ್ಪೊಲುಚಸ್
೧೬೩೮೪. ಪೊಡಲಿರಿಯಸ್
೩೨೭೬೮. ಆಸ್ಕ್ಲೆಪಿಸ್
ಕೆಲವು ರೋಗದ ಗುಣಲಕ್ಷಣಗಳನ್ನು ಮತ್ತು ಗುರುತುಗಳನ್ನು ಮೊಟ್ಟಮೊದಲನೆಯ ಬಾರಿಗೆ ವಿವರಿಸಿದವನು ಹಿಪಾಕ್ರಟೀಸ್ ಎಂದು ನಂಬಲಾಗಿದ್ದರಿಂದ ಅವನ ನಂತರ ಈ ರೋಗದ ಗುಣಲಕ್ಷಣಗಳಿಗೆ ಮತ್ತು ಗುರುತುಗಳಿಗೆ ಅವನ ಹೆಸರನ್ನೇ ಇಡಲಾಯಿತು. ಹಿಪಾಕ್ರಟಿಕ್ ಫೇಸ್ ಎಂಬುದು, ಸಾವಿನಿಂದಾಗಿ ಅಥವಾ ದೀರ್ಘಕಾಲದ ರೋಗದಿಂದಾಗಿ, ಅಧಿಕ ವಿಸರ್ಜನೆಯಿಂದಾಗಿ, ಹೆಚ್ಚು ಹೊಟ್ಟೆ ಹಸಿವಿನಿಂದಾಗಿ ಹಾಗೂ ಇತ್ಯಾದಿಗಳಿಂದಾಗಿ ಮುಖಭಾವದಲ್ಲಿ ಉಂಟಾಗುವ ಬದಲಾವಣೆಯಾಗಿದೆ. ಕ್ಲಬ್ಬಿಂಗ್, ಬೆರಳುಗಳ ಮತ್ತು ಉಗುರುಗಳ ವಿಕೃತರೂಪವಾಗಿದ್ದು, ಇದನ್ನು ಹಿಪಾಕ್ರಟಿಕ್ ಬೆರಳುಗಳು ಎಂದು ಕರೆಯಲಾಗುತ್ತದೆ. ಹಿಪಾಕ್ರಟಿಕ್ ಸಕ್ಯುಷನ್ ಎಂಬುದು ಹೈಡ್ರೊಪೆನ್ಯುಮಾಥೋರಾಕ್ಸ್ ಅಥವಾ ಪೈಯೊಪೆನ್ಯುಮಾಥೋರಾಕ್ಸ್ ನ ಆಂತರಿಕ ಸಿಡಿಯುವ ಶಬ್ದವಾಗಿದೆ. ಹಿಪಾಕ್ರಟಿಕ್ ಬೆಂಚ್ (ಇದು ಮುರಿದ ಮೂಳೆಯನ್ನು ಸರಿಯಾಗಿ ಜೋಡಿಸುವ ಚಿಕಿತ್ಸೆಯಲ್ಲಿ ಎಳೆತವನ್ನು ಬಳಸುವ ಸಾಧನವಾಗಿದೆ) ಮತ್ತು ಹಿಪಾಕ್ರಟಿಕ್ ಕ್ಯಾಪ್-ಆಕಾರದ ಬ್ಯಾಂಡೇಜ್ಗಳು ಹಿಪಾಕ್ರಟೀಸ್ನ ಹೆಸರನ್ನು ಇಟ್ಟಂತಹ ಎರಡು ಸಾಧನಗಳಾಗಿವೆ.[೭೨] ಹಿಪಾಕ್ರಟಿಕ್ ಗ್ರಂಥ ಸಂಗ್ರಹ ಮತ್ತು ಹಿಪಾಕ್ರಟಿಕ್ ಓತ್ (ಪ್ರಮಾಣ) ಗಳು ಕೂಡ ಅವನ ಸಮಾನನಾಮಧಾರಿಯಾಗಿವೆ. ಹಿಪೊಕ್ರ್ಯಾಸ್ ಎಂಬ ಪಾನೀಯವನ್ನು ಕೂಡ ಹಿಪಾಕ್ರಟೀಸ್ ಕಂಡುಹಿಡಿದಿದ್ದಾನೆ ಎಂದು ನಂಬಲಾಗಿದೆ. ರಿಸಸ್ ಸ್ಯಾರ್ಡೋನಿಕಸ್, ಮುಖದ ಸ್ನಾಯುಗಳ ಸೆಡೆತವನ್ನು ಹಿಪಾಕ್ರಟಿಕ್ ನಗು ಎಂದು ಕರೆಯಬಹುದು.
ಆಧುನಿಕ ಯುಗದಲ್ಲಿ, ಚಂದ್ರನ ಮೈಮೇಲೆ ಕಂಡುಬರುವ ಬಟ್ಟಲಿನಾಕಾರದ ಕುಳಿಗೆ ಹಿಪಾಕ್ರಟೀಸ್ ಎಂದು ಹೆಸರಿಡಲಾಗಿದೆ. ಹಿಪಾಕ್ರಟಿಕ್ ಮ್ಯೂಸಿಯಂ, ಇದು ಕಾಸ್ನ ಗ್ರೀಕ್ ಐಲ್ಯಾಂಡ್ನಲ್ಲಿರುವ ಮ್ಯೂಸಿಯಂ ಆಗಿದ್ದು, ಇದನ್ನು ಅವನಿಗೆ ಸಮರ್ಪಿಸಲಾಗಿದೆ. ಹ್ಯಾರಿ ಪಾಟರ್ಸರಣಿಯಲ್ಲಿ, ಆರ್ಥರ್ ವೆಸ್ಲೆಯ ವಾರ್ಡ್ನ ಪ್ರಧಾನ ಪರ್ಯಾಯ ಔಷಧಿಯ ಹೆಸರು ಹಿಪಾಕ್ರಟೀಸ್ ಸ್ಮೆತ್ವಿಕ್ ಎಂದಾಗಿದೆ. ದ ಹಿಪಾಕ್ರಟೀಸ್ ಪ್ರಾಜೆಕ್ಟ್ ಎಂಬುದು ನ್ಯೂಯಾರ್ಕ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಕೇಂದ್ರದ ಕಾರ್ಯಕ್ರಮವಾಗಿದ್ದು, ಇದು ತಂತ್ರಜ್ಞಾನದ ಬಳಕೆಯ ಮೂಲಕ ಶಿಕ್ಷಣವನ್ನು ವರ್ಧಿಸುವುದಾಗಿದೆ. ಪ್ರಾಜೆಕ್ಟ್ ಹಿಪಾಕ್ರಟೀಸ್ ("HI gh P erfO rmance C omputing for R obot-A ssisTE d Surgery ಯ ಪ್ರಥಮಾಕ್ಷರಿಯಾಗಿದೆ") ಎಂಬುದು ಗಣಕ ವಿಜ್ಞಾನದ ಕಾರ್ನೆಗಿ ಮೆಲಾನ್ ಸ್ಕೂಲ್ ಮತ್ತು ಶ್ಯಾಡಿಸೈಡ್ ವೈದ್ಯಕೀಯ ಕೇಂದ್ರದ ಪ್ರಯತ್ನವಾಗಿದ್ದು, ಇದನ್ನು "ಮುಂದಿನ ಪೀಳಿಗೆಯ ಕಂಪ್ಯೂಟರ್ ನೆರವಿನಿಂದ ಶಸ್ತ್ರಚಿಕಿತ್ಸೆ ನಡೆಸುವ ರೊಬೋಟ್ ಗಳಿಗಾಗಿ, ಮುಂದಿನ ಯೋಜನೆಯನ್ನು ಹಾಗೂ ಅನುಕರಣೆ ಮತ್ತು ನಿರ್ವಾಹಣೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು" ಇದನ್ನು ಕೈಗೊಳ್ಳಲಾಗಿದೆ.[೭೩] ಕೆನಡಿಯನ್ ಹಿಪಾಕ್ರಟಿಕ್ ರೆಜಿಸ್ಟ್ರಿ ಮತ್ತು ಅಮೇರಿಕನ್ ಹಿಪಾಕ್ರಟಿಕ್ ರೆಜಿಸ್ಟ್ರಿ, ವೈದ್ಯರ ಸಂಸ್ಥೆಗಳಾಗಿದ್ದು, ಹಿಪಾಕ್ರಟಿಕ್ ಪ್ರಮಾಣದ ಮೂಲ ತತ್ತ್ವಗಳನ್ನು ಬದಲಾಗುತ್ತಿರುವ ಸಾಮಾಜಿಕ ಕಾಲದಲ್ಲಿ ಉಲ್ಲಂಘಿಸುವಂತಿಲ್ಲ ಎಂದು ಹೇಳುವ ಮೂಲಕ ಅವನ ತತ್ತ್ವಗಳನ್ನು ಎತ್ತಿಹಿಡಿಯುತ್ತಿವೆ.
{{citation}}
: Check |url=
value (help)
<ref>
tag; name "britannica" defined multiple times with different content
Find more about ಹಿಪಾಕ್ರಟೀಸ್ at Wikipedia's sister projects | |
Definitions and translations from Wiktionary | |
Media from Commons | |
Learning resources from Wikiversity | |
Quotations from Wikiquote | |
Source texts from Wikisource | |
Textbooks from Wikibooks |
{{citation}}
: CS1 maint: location missing publisher (link).{{citation}}
: Check |isbn=
value: checksum (help).{{citation}}
: Unknown parameter |DUPLICATE DATA: place=
ignored (help).{{citation}}
: More than one of |given1=
and |first1=
specified (help); More than one of |number=
and |issue=
specified (help); More than one of |surname1=
and |last1=
specified (help).{{citation}}
: |given1=
has generic name (help); Unknown parameter |original date=
ignored (help)CS1 maint: numeric names: authors list (link).